ADVERTISEMENT

ಸಚಿವ ಖರ್ಗೆ ಹೇಳಿಕೆ ಮೂರ್ಖತನದ ಪರಮಾವಧಿ: ಶಾಂತಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:10 IST
Last Updated 15 ಅಕ್ಟೋಬರ್ 2025, 5:10 IST
<div class="paragraphs"><p>ಶಾಂತಗೌಡ ಪಾಟೀಲ</p></div>

ಶಾಂತಗೌಡ ಪಾಟೀಲ

   

ಬಾಗಲಕೋಟೆ: ಸರ್ಕಾರಿ ಜಾಗೆಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಹಾಸ್ಯಾಸ್ಪದ, ಮೂರ್ಖತನದ ಪರಮಾವಧಿಯಾಗಿದೆ. ಸಂಪುಟ ಪುನರ್‌ರಚನೆಯಲ್ಲಿ ಸಚಿವ ಸ್ಥಾನ ಉಳಿಸಿಕೊಳ್ಳಲು ಹಾಗೂ ಹೈಕಮಾಂಡ್ ಮೆಚ್ಚಿಸಲು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಕೂಗಲೇ ಇಲ್ಲ ಎಂದರು. ಪ್ಯಾಲೆಸ್ಟೈನ್‌, ಲೆಬನಾನ್‌ ಉಗ್ರವಾದಿಗಳ ಭಾವಚಿತ್ರ, ಅಲ್ಲಿಯ ಧ್ವಜ ಹಿಡಿದಾಗ ತನಿಖೆ ಮಾಡಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆಯುವ ಧೈರ್ಯ ಸಚಿವರಿಗೆ ಇಲ್ಲ ಎಂದು ಟೀಕಿಸಿದರು.

ADVERTISEMENT

ಜಗತ್ತಿನ 156 ರಾಷ್ಟ್ರಗಳಲ್ಲಿ 3,289 ಶಾಖೆಗಳನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಾರಂಭವಾಗಿದೆ. ದೇಶದಲ್ಲಿ ಭೂಕಂಪ, ಬರಗಾಲ, ನೆರೆ, ಯುದ್ಧ ಎದುರಾದಾಗ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದೆ. ಜಾತಿ, ಪಂಗಡ ಪರಿಗಣಿಸುವುದಿಲ್ಲ ಎಂದರು.

ಕಾಂಗ್ರೆಸ್‌ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನೆರೆ ಪರಿಹಾರಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಸಚಿವ ಜಿಲ್ಲೆಯಲ್ಲಿಯೇ ಗ್ರಂಥಪಾಲಕಿಯೊಬ್ಬರು ವೇತನ ಸಿಕ್ಕಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ ಎಂದು ಆರೋಪಿಸಿದರು.

ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ವಾರಸುದಾರ ಎಂಬ ಕಾರಣಕ್ಕೆ ಸಚಿವರಾಗಿದ್ದೀರೇ ಹೊರತು ನಿಮ್ಮ ಪರಿಶ್ರಮ, ಯೋಗ್ಯತೆಯಿಂದಲ್ಲ. ಸಂಘ ದ್ವೇಷಿ ಮುಂದುವರಿಸಿದರೆ, ಅದರ ಫಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಿಯಾಂಕ್ ಖರ್ಗೆ ಅವರ ಪತ್ರವನ್ನು ನಿರ್ಲಕ್ಷಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ. ಹೈಕಮಾಂಡ್ ಎಲ್ಲಿ ತಪ್ಪು ತಿಳಿದುಕೊಳ್ಳುವುದೋ ಎಂಬ ಭಯದಿಂದ ಸಿದ್ದರಾಮಯ್ಯ ಕೂಡ ಖರ್ಗೆ ಅವರಿಗೆ ಧ್ವನಿಗೂಡಿಸಿದ್ದಾರೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದರು.

ಪಡಿತರ ಅಕ್ರಮ ಸಾಗಣೆ, ಮರಳಿನ ಗೂಂಡಾಗಿರಿ ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಏಕೆ ಎತ್ತುತ್ತಿಲ್ಲ ಎಂಬ ಪ್ರಶ್ನೆಗೆ, ವಿಷಯ ಸಂಪೂರ್ಣವಾಗಿ ಗೊತ್ತಿಲ್ಲ. ಸಮಸ್ಯೆ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.

ರಾಜು ನಾಯ್ಕರ್, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರಮಠ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.