ADVERTISEMENT

ಬಾಗಲಕೋಟೆ | ಕಾಯಂ, ಕನಿಷ್ಠ ವೇತನಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 3:52 IST
Last Updated 10 ಜುಲೈ 2025, 3:52 IST
ಬಿಸಿಯೂಟ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಬಿಸಿಯೂಟ ನೌಕರರ ಸಂಘದ ಸದಸ್ಯರು ಬುಧವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು
ಬಿಸಿಯೂಟ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಬಿಸಿಯೂಟ ನೌಕರರ ಸಂಘದ ಸದಸ್ಯರು ಬುಧವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಬಿಸಿಯೂಟ ನೌಕರರನ್ನು ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬಿಸಿಯೂಟ ನೌಕರರ ಸಂಘದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಎಂಡಿಎಂ ಯೋಜನೆಗೆ ಅನುದಾನ ಹೆಚ್ಚಿಸಬೇಕು. ಕನಿಷ್ಠ ₹26 ಸಾವಿರ ವೇತನ ನೀಡಬೇಕು. ಮಾಸಿಕ ಪಿಂಚಣಿ ₹10 ಸಾವಿರ ಕೊಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಇಡಿಗಂಟು ಯೋಜನೆ ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಉತ್ತಮ ಅಡುಗೆ ಕೇಂದ್ರಗಳನ್ನು ನಿರ್ಮಿಸಬೇಕು. 12 ತಿಂಗಳು ಕೆಲಸ ಮತ್ತು ಕನಿಷ್ಠ ಕೂಲಿ ನೀಡಬೇಕು. ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿ ನಡೆಸಬೇಕು. ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ನೀಡಬಾರದು. ಶಾಲೆಗಳಲ್ಲಿ ಡಿ ಗ್ರೂಪ್‌ ನೌಕರರು ಇಲ್ಲದಿರುವುದರಿಂದ ಶಾಲೆಯ ಇನ್ನಿತರ ಕೆಲಸ ನೀಡಿ ಶಾಲಾ ಸಿಬ್ಬಂದಿ ಎಂದು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿ ಕುಟುಂಬದವರಿಗೆ ಕೆಲಸ ನೀಡಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ ₹25 ಲಕ್ಷ ಪರಿಹಾರ ನೀಡಬೇಕು. ಕಾರ್ಮಿಕ ಸಂಘಗಳ ಕಡ್ಡಾಯ ನೋಂದಣಿ, ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆ ನಿಯಂತ್ರಿಸಬೇಕು. ವಿದ್ಯುತ್‌ ತಿದ್ದುಪಡಿ ಮಸೂದೆ ವಾಪಸ್‌ ಪಡೆಯಬೇಕು ಒತ್ತಾಯಿಸಿದರು. ತಾಲ್ಲೂಕು ಅಧ್ಯಕ್ಷೆ ರೇಖಾ ಮ್ಯಾಗೇರಿ, ಪ್ರಧಾನ ಕಾರ್ಯದರ್ಶಿ ಎ.ಯು. ಅರ್ಕಸಾಲಿ, ರುಕ್ಮಿಣಿ, ರೇಣುಕಾ, ಗುರುಬಾಯಿ, ಸುಜಾತಾ, ಲಕ್ಷ್ಮಿ, ರಂಗವ್ವ, ಮಾದೇವಿ, ಕವಿತಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.