ಬಾಗಲಕೋಟೆ: ವಕ್ಫ್ ಮಸೂದೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಬಿಜೆಪಿಯು ಮುಸ್ಲಿಂ ಸಮುದಾಯದ ಆಸ್ತಿಗಳಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಲು ಮುಂದಾಗಿದೆ. ವಕ್ಫ್‌ಗಳ ಸುಧಾರಣೆಯ ಮುಖವಾಡದಲ್ಲಿ ವಕ್ಫ್ ವ್ಯವಸ್ಥೆಯಿಂದ ದೊರೆಯುವ ಪ್ರಯೋಜನಗಳನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ. ಇದು 2019ರ ಬಿಜೆಪಿ ಪ್ರಣಾಳಿಕೆ ವಿರುದ್ಧವಾಗಿದೆ ಎಂದು ದೂರಿದರು.
ವಕ್ಫ್ ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಬಿಜೆಪಿ ವಕ್ಫ್‌ಗಳ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ. ಇದು ಬಿಜೆಪಿಯ ಕೆಟ್ಟ ಅಜೆಂಡಾವೇ ಹೊರತು ಬೇರೇನೂ ಅಲ್ಲ. ಸಾಮಾನ್ಯ ತತ್ವಗಳಿಗೆ ಹಾಗೂ ಭೂಮಿಯ ಇತ್ಯರ್ಥಗೊಂಡ ಕಾನೂನಿಗೆ ವಿರುದ್ಧವಾದ ತಾರತಮ್ಯವು ವಕ್ಫ್ ಮಸೂದೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಆರೋಪಿಸಿದರು.
ಪ್ರಸ್ತಾವಿತ ಮಸೂದೆಯು ಬಹುಸಂಖ್ಯಾತ ಎಂದು ಕರೆಯಲ್ಪಡುವವರ ಹೆಸರಿನಲ್ಲಿ ವಕ್ಫ್ ಅನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ನ್ಯಾಯಮಂಡಳಿಯು ನ್ಯಾಯಾಂಗ ಸಂಸ್ಥೆಯಾಗಿದ್ದು, ಅದು ಕಾರ್ಯನಿರ್ವಾಹಕ ಸಂಸ್ಥೆಗೆ ಅಧೀನವಾಗಿರುವುದಿಲ್ಲ. ಮಸೂದೆಯು ನ್ಯಾಯಾಂಗದ ಅಧಿಕಾರ ಕಸಿದುಕೊಳ್ಳುತ್ತದೆ. ನ್ಯಾಯಾಂಗವನ್ನು ಕಾರ್ಯಾಂಗಕ್ಕೆ ಅಧೀನಗೊಳಿಸಲಾಗಿದೆ. ಇದು ಸಾಮಾನ್ಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ದೂರಿದರು.
ವಕ್ಫ್ ಬೋರ್ಡ್‌ನ ಸದಸ್ಯರಾಗಿ ಹಿಂದೂಗಳಿಗೆ ಅವಕಾಶ ನೀಡುವುದು ಸಂಪೂರ್ಣವಾಗಿ ತಾರತಮ್ಯವಾಗಿದೆ. ವಕ್ಫ್‌ನ ಅಧಿಕಾರ ವ್ಯಾಪ್ತಿಯಿಂದ ಶತ್ರುಗಳ ಆಸ್ತಿಗಳನ್ನು ಹೊರಗಿಡುವುದು ದೊಡ್ಡ ಪ್ರಮಾಣದ ಹಾನಿ ಉಂಟುಮಾಡುತ್ತದೆ ಎಂದು ಆಕ್ಷೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.