ADVERTISEMENT

ಬೀಳಗಿ | ಖಾಲಿ ಜಾಗಗಳಲ್ಲಿ ಕುಡುಕರ ಹಾವಳಿ

‘ಮುಕ್ತ ಬಾರ್‌’ಗಳಾಗುತ್ತಿವೆ ಐತಿಹಾಸಿಕ ತಾಣ; ಇಲ್ಲ ಪೊಲೀಸ್‌ ಇಲಾಖೆಯ ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:08 IST
Last Updated 5 ಫೆಬ್ರುವರಿ 2026, 6:08 IST
ಸಿದ್ದೇಶ್ವರ ಶಾಲೆಯ ಆವರಣದಲ್ಲಿ ಕಂಡುಬಂದ ದೃಶ್ಯ
ಸಿದ್ದೇಶ್ವರ ಶಾಲೆಯ ಆವರಣದಲ್ಲಿ ಕಂಡುಬಂದ ದೃಶ್ಯ   

ಬೀಳಗಿ: ರಾತ್ರಿ 10 ಗಂಟೆ ಹೊತ್ತಿಗೆ ಬಾರ್‌, ವೈನ್‌ ಶಾಪ್‌ಗಳು ಬಂದ್‌ ಆದರೂ ಪಟ್ಟಣದಾದ್ಯಂತ ಕುಡುಕರ ಹಾವಳಿ ಮಾತ್ರ ರಾತ್ರಿಯಿಡೀ ಮುಂದುವರಿಯುತ್ತದೆ. ಪಟ್ಟಣದಲ್ಲಿರುವ ಉದ್ಯಾನ, ಮೈದಾನ, ಶಾಲಾ ಆವರಣ, ಐತಿಹಾಸಿಕ ಸ್ಥಳ, ಕೆರೆ, ಕಟ್ಟೆ, ಹೊಂಡಗಳ ಆಸುಪಾಸಿನ ಖಾಲಿ ಜಾಗಗಳೇ ಕುಡುಕರ ಪಾಲಿಗೆ ಬಾರ್‌ ಆಗಿ ತಲೆ ಎತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ.

ಇಂತಹ ಘಟಣೆ ಪಟ್ಟಣದಲ್ಲಿ ಇದೇ ಮೊದಲಲ್ಲ. ಇದು ಸರ್ವೇ ಸಾಮಾನ್ಯವಾಗಿದ್ದು, ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ. ಖಾಲಿ ಜಾಗಗಳಲ್ಲಿ ಕುಡುಕರ ಹಾವಳಿ ತೀವ್ರಗೊಳ್ಳುತ್ತಿದ್ದು ಸಾರ್ವಜನಿಕರು ರಸ್ತೆಗಳಲ್ಲಿ ನಿರಾತಂಕವಾಗಿ ಓಡಾಡುವುದು ಕಷ್ಟಸಾಧ್ಯವಾಗಿದೆ.

ಎಲ್ಲೆಂದರಲ್ಲಿ ‘ಮುಕ್ತ ಬಾರ್‌’ಗಳು ತಲೆ ಎತ್ತುತ್ತಿದ್ದು, ಕುಡುಕರ ನಿಯಂತ್ರಣವೇ ಇಲ್ಲದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಾನೂನಿನ ಭಯ ಇಲ್ಲದ ಕಾರಣ ಕಿಡಿಗೇಡಿಗಳ ಹಾವಳಿ ನಿರಾತಂಕವಾಗಿ ಮುಂದುವರಿದಿದೆ.

ADVERTISEMENT

ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಕುಡಿಯುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯ ಕಡಿವಾಣ ಇಲ್ಲದಾಗಿದೆ. ಪಟ್ಟಣದಿಂದ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳುವ ಹಾದಿ ಬದಿಯ ಜಾಗ ಕುಡುಕರಿಗೆ ಹಾಗೂ ಜನ್ಮದಿನ ಆಚರಿಸಿಕೊಳ್ಳುವವರಿಗೆ ಸ್ವರ್ಗದ ತಾಣವಾಗಿದೆ. ಅಲ್ಲಿ ಹೇಳುವವರು ಕೇಳುವವರೇ ಇಲ್ಲವಾಗಿದೆ.

ರಾತ್ರಿ ಯುವಕರ ಗುಂಪು ಎಲ್ಲೆಂದರಲ್ಲಿ ಕ್ಯಾಂಪ್‌ ಹಾಕುತ್ತದೆ. ಮೊಬೈಲ್‌ ಫೋನ್‌ಗಳ ಬೆಳಕಿನಲ್ಲೇ ಮದ್ಯಸೇವನೆ ಮಾಡುತ್ತಾರೆ .ಬೀಳಗಿ ಜಮಖಂಡಿ ಪ್ರಮುಖ ಹೆದ್ದಾರಿ ರಸ್ತೆಯ ಆಸುಪಾಸು ಹೊಲಗಳಲ್ಲಿ, ಒಡ್ಡಿನ ಜಾಗಗಳಲ್ಲೂ ಕಿಡಿಗೇಡಿಗಳು ನಿತ್ಯ ಕುಡಿತ ಮುಂದುವರಿಸಿದ್ದಾರೆ.

ಕುಡುಕರ ಹಾವಳಿಗೆ ಶಾಲಾ ಆವರಣಗಳೂ ಮುಕ್ತವಾಗಿಲ್ಲ.ಪಟ್ಟಣದ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂಭಾಗದಲ್ಲಿರುವ ಶಾಲಾ ಆವರಣವೂ ಕುಡುಕರ ಅಡ್ಡೆಯಾಗಿ ಗುರುತಿಸಿಕೊಂಡಿದೆ. ಪಾಳು ಬಿದ್ದಿರುವ ಭವನಗಳು, ಹೊರ ಕೊಠಡಿಗಳೂ ಇಸ್ಪೀಟ್‌ ಅಡ್ಡೆ, ರಾತ್ರಿ ಬಾರ್‌ ಗಳಾಗಿವೆ.

ಸ್ಥಳೀಯ ಸಿದ್ದೇಶ್ವರ ಕಾಲೇಜಿನ ಆವರಣದಲ್ಲೂ ಕುಡುಕರ ಹಾವಳಿ ಮಿತಿಮೀರಿದ್ದು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು,ಗುಟಕಾ ಚೀಟ್,ಸಿಗರೇಟ್ ಹಾಳೆ ಬಿದ್ದು ಚೆಲ್ಲಾಡುತ್ತಿವೆ. ಸ್ಥಳೀಯ ಕ್ರೀಡಾಪಟುಗಳು ಬೆಳಿಗ್ಗೆ ಮೈದಾನಕ್ಕೆ ಬಂದು ಒಡೆದ ಬಾಟಲಿ ತೆಗೆಯುವುದು ಕ್ರೀಡಾಂಗಣ ಸ್ವಚ್ಛತೆಗೊಳಿಸುವುದೇ ಒಂದು ದೊಡ್ಡ ತಲೆ ನೋವಾಗಿದೆ.

ಪಟ್ಟಣದ ಸಮೀಪದಲ್ಲಿರುವ ಹೌಸಿಂಗ್ ಕಾಲೋನಿ ಪ್ರದೇಶ ಸ್ವಯಂಘೋಷಿತ ಬಾರ್‌, ವೈನ್‌ಶಾಪ್‌ಗಳಾಗಿ ತಲೆ ಎತ್ತಿವೆ. ಸರ್ವೀಸ್‌ ರಸ್ತೆಯಲ್ಲೂ ಎಲ್ಲೆಂದರಲ್ಲಿ ಕುಡುಕರು ಕಾಣಸಿಗುತ್ತಾರೆ.

‘ಕುಡುಕರಿಗೆ ಸಮಯದ ಪರಿವೆಯೇ ಇಲ್ಲವಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಕುಡಿತ ಆರಂಭಿಸುತ್ತಾರೆ.ಸಂಜೆಯಾಗುತ್ತಿದ್ದಂತೆಯೇ ಖಾಲಿ ಜಾಗಗಳ ಬಳಿ ಮಕ್ಕಳು, ಮಹಿಳೆಯರು ಓಡಾಡಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಕುಡುಕರ ಹಾವಳಿಯನ್ನು ನಿಯಂತ್ರಿಸಬೇಕಾದ ಪೊಲೀಸ್‌ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದು ಖಂಡನೀಯ’ ಎಂದು ಪಟ್ಟಣ ಪಂಚಾಯತ ಸದಸ್ಯ ಸಿದ್ದು ಮಾದರ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ಕಿರಿಕಿರಿ ಮೊಬೈಲ್‌ ಬೆಳಕಿನಲ್ಲಿ ಮದ್ಯಸೇವನೆ ಕಾಲೇಜು ಆವರಣ ಸ್ವಚ್ಛಗೊಳಿಸುವುದೇ ಸವಾಲು

ವಯೋವೃದ್ದರೂ ಮಹಿಳೆಯರು ನಿರಾತಂಕವಾಗಿ ಉದ್ಯಾನವನ ಮತ್ತು ದೇವಸ್ಥಾನಗಳ ಸುತ್ತಮುತ್ತ ಬೆಳಗ್ಗೆ ವಾಕಿಂಗ್ ಮಾಡುವುದು ಕಷ್ಟವಾಗಿದೆ. ಪೊಲೀಸ್ ಇಲಾಖೆಯವರು ಸಾರ್ವಜನಿಕ ಸ್ಥಳದಲ್ಲಿ ಕುಡಿಯುವ ಕುಡುಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು
ವಾಕಿಂಗ್ ಗೆಳೆಯರ ಬಳಗ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.