ADVERTISEMENT

ಮಹಾಲಿಂಗಪುರ: ಬಸ್ ತಡೆದು ಸಾರ್ವಜನಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:31 IST
Last Updated 6 ಜನವರಿ 2026, 7:31 IST
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯಲ್ಲಿ ನೂತನ ಬಸ್ ನಿಲ್ದಾಣದ ಮೂಲಕ ಬಸ್‍ಗಳ ಸಂಚಾರಕ್ಕೆ ಆಗ್ರಹಿಸಿ ಸಾರ್ವಜನಿಕರು ಮುಧೋಳ ಡಿಪೋದ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು 
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯಲ್ಲಿ ನೂತನ ಬಸ್ ನಿಲ್ದಾಣದ ಮೂಲಕ ಬಸ್‍ಗಳ ಸಂಚಾರಕ್ಕೆ ಆಗ್ರಹಿಸಿ ಸಾರ್ವಜನಿಕರು ಮುಧೋಳ ಡಿಪೋದ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು    

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣದಿಂದ ಬಸ್‍ಗಳ ಸಂಚಾರಕ್ಕೆ ಆಗ್ರಹಿಸಿ ಸಾರ್ವಜನಿಕರು ಮುಧೋಳ ಡಿಪೊ ಬಸ್‍ಗಳನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ರನ್ನಬೆಳಗಲಿ ಪಟ್ಟಣದಲ್ಲಿ ₹1.57 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಉದ್ಘಾಟನೆಗೊಂಡು ಒಂದು ವರ್ಷ ಸಮೀಪಿಸುತ್ತಾ ಬಂದರೂ ಪ್ರಯಾಣಿಕರ ಸೇವೆಗೆ ಲಭ್ಯವಾಗಿಲ್ಲ. ಇದರಿಂದ ನಿತ್ಯ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣ ಇದ್ದರೂ ಇಲ್ಲದಂತಾಗಿದ್ದರಿಂದ ಬೇಸತ್ತ ಸಾರ್ವಜನಿಕರು ಸೋಮವಾರ ನಿಲ್ದಾಣದ ಮೂಲಕವೇ ಹಾಯ್ದು ಎಲ್ಲ ಬಸ್‍ಗಳು ಸಂಚರಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.

ಬಸ್ ನಿಲ್ದಾಣದ ಹೊರಗೆ ರಸ್ತೆಗೆ ಅಡ್ಡವಾಗಿ ನಿಂತ ಸಾರ್ವಜನಿಕರು, ಪಟ್ಟಣದ ಮೂಲಕ ಹಾಯ್ದು ಹೋಗುವ ಬಸ್‍ಗಳನ್ನು ಬಸ್ ನಿಲ್ದಾಣದ ಆವರಣಕ್ಕೆ ಕಳುಹಿಸಿ ಅದರ ಮೂಲಕವೇ ಹಾಯ್ದು ಹೋಗುವಂತೆ ಸೂಚಿಸಿದರು.

ADVERTISEMENT

ಅದರಂತೆ ಬಸ್‍ಗಳು ನಿಲ್ದಾಣದಿಂದ ತೆರಳಿದರೆ ಮುಧೋಳ ಡಿಪೊ ಬಸ್‍ಗಳು ಮಾತ್ರ ಒಳಗೆ ಬರಲಿಲ್ಲ.
ಮುಧೋಳ ಡಿಪೊ ಬಸ್‍ಗಳ ಡ್ರೈವರ್ ಹಾಗೂ ಕಂಡಕ್ಟರ್ ನನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ‘ಬಸ್ ನಿಲ್ದಾಣದ ಒಳ ಆವರಣ ಮೂಲಕವೇ ಬಸ್ ತೆಗೆದುಕೊಂಡು ಹೋಗಬೇಕು’ ಎಂದು ಪಟ್ಟು ಹಿಡಿದರು. ‘ಮುಧೋಳ ಡಿಪೋದ ವ್ಯವಸ್ಥಾಪಕರು ಅನುಮತಿ ನೀಡಿಲ್ಲ’ ಎಂದು ಚಾಲಕ ಹಾಗೂ ನಿರ್ವಾಹಕ ಹೇಳಿದಾಗ ಆಕ್ರೋಶಗೊಂಡ ಸಾರ್ವಜನಿಕರು ಬಸ್ ನಿಲ್ದಾಣದ ಹೊರಗೆ ಮುಧೋಳ ಡಿಪೊದ ಮೂರ್ನಾಲ್ಕು ಬಸ್ ತಡೆದು ಪ್ರತಿಭಟನೆ ನಡೆಸಿದರು.

ನಿಲ್ದಾಣದ ಮೂಲಕ ಹಾಯ್ದು ಹೋಗುವ ಬಸ್‍ಗಳನ್ನು ಸಂಚಾರಕ್ಕೆ ಅನುವು ಮಾಡಿದ ಸಾರ್ವಜನಿಕರು, ನಿಲ್ದಾಣದ ಒಳಗೆ ಹೋಗದ ಬಸ್‍ಗಳನ್ನು ರಸ್ತೆಯಲ್ಲಿಯೇ ತಡೆದರು.

ಸುದ್ದಿ ತಿಳಿದು ಮುಧೋಳ ಡಿಪೊದ ಸಿಬ್ಬಂದಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಮುಧೋಳ ಡಿಪೊ ವ್ಯವಸ್ಥಾಪಕಿ ವಿದ್ಯಾ ನಾಯಕ ಮಾತನಾಡಿ, ‘ಬಸ್ ನಿಲ್ದಾಣದಿಂದ ಬಸ್‍ಗಳು ಹೊರಗೆ ಹೋಗುವ ವೇಳೆ ಅಲ್ಲಿನ ಸ್ಥಳ ಇಕ್ಕಟ್ಟಾಗಿದೆ. ಇದರಿಂದ ಎದುರಿಗೆ ಇನ್ನೊಂದು ವಾಹನ ಬಂದರೆ ಅಪಘಾತ ಆಗುವ ಸಂಭವ ಹೆಚ್ಚಿದೆ. ಮುಂಜಾಗ್ರತೆ ಕ್ರಮವಾಗಿ ಅನುಮತಿ ನೀಡಿಲ್ಲ. ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಸಮಸ್ಯೆ ಪರಿಹರಿಸಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.