ರಾಂಪುರ: ಬಾಗಲಕೋಟೆ ತಾಲ್ಲೂಕಿನ ರಾಂಪುರ ಗ್ರಾಮ ಈಗ ಮಿನಿ ಪಟ್ಟಣವೇ ಆಗಿದೆ. ಉಪ ತಹಶೀಲ್ದಾರ್ ಕಚೇರಿ, ಪೊಲೀಸ್ ಹೊರಠಾಣೆ, ಆರೋಗ್ಯ ಕೇಂದ್ರ, ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ಶಾಲಾ ಕಾಲೇಜು, ವಾರಕ್ಕೊಮ್ಮೆ ದೊಡ್ಡದಾದ ಸಂತೆ ಹೀಗೆ ಎಲ್ಲವನ್ನು ಹೊಂದಿರುವ ಈ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುತ್ತಿದ್ದಾರೆ.
ಬಾಗಲಕೋಟೆ-ಆಲಮಟ್ಟಿ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್‌ವಸತಿ ಇಲಾಖೆಯ 1 ಎಕರೆ 11 ಗುಂಟೆ ಜಾಗೆಯನ್ನು ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ 20-2-2021ರಲ್ಲಿ ಮಂಜೂರು ಮಾಡಿ ಆದೇಶಿಸಲಾಗಿದೆ. ತದನಂತರದಲ್ಲಿ ಬಸ್ ನಿಲ್ದಾಣಕ್ಕೆ ಜಾಗೆ ಮೀಸಲು ಎಂಬ ಪದವನ್ನು ತೆಗೆದು ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ಎಂದು ನಮೂದಿಸುವಂತೆ ಸಂಸ್ಥೆಯವರು ಕೋರಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯವರು ಹೆಸರು ಬದಲಾಯಿಸಿ ಉತಾರ ಪೂರೈಸಿದ್ದಾರೆ.
ಈ ನಡುವೆ ಜಾಗೆಯ ಒತ್ತುವರಿ ತೆರವುಗೊಳಿಸುವ ವಿಷಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಟಾಪಟಿ ಶುರುವಾಗಿದ್ದು ಈತನಕ ಮುಗಿದಿಲ್ಲ. ಒತ್ತುವರಿ ತೆರವುಗೊಳಿಸಿಕೊಡುವಂತೆ ಸಾರಿಗೆ ಸಂಸ್ಥೆಯವರು ಗ್ರಾಮ ಪಂಚಾಯಿತಿಯವರಿಗೆ ಹೇಳುತ್ತಾರೆ. ಇದು ನಮಗೆ ಸಂಬಂಧಿಸಿದ್ದಲ್ಲ, ಜಾಗೆಯ ಮಾಲೀಕತ್ವ ನಿಮಗಿರುವಾಗ ನೀವೇ ಆ ಕಾರ್ಯ ಮಾಡಿ, ನಾವು ಸಹಕಾರ ನೀಡುತ್ತೇವೆ ಎಂದು ಗ್ರಾಮ ಪಂಚಾಯಿತಿಯವರು ಹೇಳುತ್ತಾರೆ. ಹೀಗಾಗಿ ಬಸ್ ನಿಲ್ದಾಣ ನಿರ್ಮಾಣದ ವಿಷಯ ನೆನೆಗುದಿಗೆ ಬಿದ್ದಿದೆ.
ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ರಾಂಪುರಿನ ಈ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರುಗಳು ಈ ಸಮಸ್ಯೆ ಪರಿಹಾರಕ್ಕೆ ಯಾಕೆ ಆಸಕ್ತಿ ತೋರುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಈ ವಿಷಯದ ಕುರಿತಾಗಿ ರಸ್ತೆ ಸಾರಿಗೆ ಸಂಸ್ಥೆಯವರು ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತಂದಿದ್ದು, ಅವರು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ತಾ.ಪಂ. ಇಒ ಡಿ.18ರಂದು ಸಿಇಒಗೆ ಪತ್ರ ಬರೆದು ಮಾಹಿತಿ ನೀಡಿ, ‘ಖಾಸಗಿ ಸ್ವತ್ತಿನಲ್ಲಿರುವ ಆಸ್ತಿಯನ್ನು ತೆರವುಗೊಳಿಸಲು ಪಿಡಿಒಗೆ ಅವಕಾಶವಿಲ್ಲ. ಒಂದು ವೇಳೆ ಆ ಕಾರ್ಯಕ್ಕೆ ಅವರು ಮುಂದಾದರೆ ಅದು ಅಧಿಕಾರದ ದುರುಪಯೋಗವಾಗುತ್ತದೆ. ಒತ್ತುವರಿಯನ್ನು ಆಸ್ತಿ ಮಾಲೀಕರಾದ ರಸ್ತೆ ಸಾರಿಗೆ ಸಂಸ್ಥೆಯೇ ತೆರವುಗೊಳಿಸಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.
ಜಿ.ಪಂ. ಸಿಇಒಗೆ ಪತ್ರ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರವಸತಿ ಇಲಾಖೆಯವರು ಬಸ್ ನಿಲ್ದಾಣಕ್ಕೆ ನಿವೇಶನ ಹಸ್ತಾಂತರಿಸುವ ಪೂರ್ವದಲ್ಲಿ ಈ ಜಾಗೆ ಒತ್ತುವಾರಿಯಾಗಿದ್ದರೆ ಅದನ್ನು ತೆರವು ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಗೆ ನಿರ್ದೇಶನ ಕೊಟ್ಟಿದ್ದಾರೆ. ಅದರ ಪ್ರಕಾರ ಅವರು ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಸಮಸ್ಯೆ ಹಾಗೆಯೇ ಮುಂದುವರೆದಿದೆ. ಈ ಬಗ್ಗೆ ನಾವು ಜಿ.ಪಂ. ಸಿಇಒ ಅವರಿಗೆ ಪತ್ರ ಬರೆದಿದ್ದೇವೆನಿತಿನ್ ಹೆಗಡೆ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್ಆರ್‌ಟಿಸಿ ಬಾಗಲಕೋಟೆ
ಕೆಎಸ್‌ಆರ್‌ಟಿಸಿಗೆ ಮಾತ್ರ ತೆರವು ಅಧಿಕಾರ ನಿವೇಶನ ಹಸ್ತಾಂತರಿಸುವಾಗ ಪುನರ್ವಸತಿ ಇಲಾಖೆ ಗ್ರಾಮ ಪಂಚಾಯಿತಿಗೆ ಯಾವುದೇ ನಿರ್ದೇಶನ ನೀಡಿಲ್ಲ. ಜಾಗೆಯ ಮಾಲೀಕತ್ವ ಕೆಎಸ್‌ಆರ್‌ಟಿಸಿಗೆ ಇರುವುದರಿಂದ ಒತ್ತುವರಿ ತೆರವು ಅವರೇ ಮಾಡಿಸಬೇಕು. ಬೇಕಾದರೆ ನಾವು ಸಹಕಾರ ನೀಡುತ್ತೇವೆ. ಅದು ಬಿಟ್ಟು ನಾವು ತೆರವುಗೊಳಿಸಬೇಕು ಎನ್ನುವುದು ಸರಿಯಲ್ಲಸುಭಾಸ ಸಂಪಗಾಂವಿ ತಾ.ಪಂ.ಇಒ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.