ADVERTISEMENT

ರಾಜೀನಾಮೆ ನೀಡಿ, ಮರು ಆಯ್ಕೆಯಾಗಿ: ಚರಂತಿಮಠ ಸವಾಲು

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:19 IST
Last Updated 7 ಮೇ 2025, 13:19 IST
ವೀರಣ್ಣ ಚರಂತಿಮಠ
ವೀರಣ್ಣ ಚರಂತಿಮಠ   

ಬಾಗಲಕೋಟೆ: ‘ಬಿಜೆಪಿ ಕಾರ್ಯಕರ್ತರು, ಮುಖಂಡರು ವಿಧಾನ ಪರಿಷತ್‌ ಚುನಾವಣೆಯಲ್ಲಿ ನಿನ್ನ ಪರವಾಗಿ ಕೆಲಸ ಮಾಡಿಲ್ಲ ಎಂದರೆ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ. ಮರು ಆಯ್ಕೆಯಾಗಿ ತೋರಿಸಲಿ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಸವಾಲು ಹಾಕಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಸಂಘಟನೆಗೆ ಹಾನಿಯುಂಟು ಮಾಡುತ್ತಿರುವ ವಿಧಾನ ಪರಿಷತ್‌ ಸದಸ್ಯ ಪಿ.ಎಚ್. ಪೂಜಾರ ಅವರನ್ನು ಹೊರಹಾಕಬೇಕು ಎಂದು ರಾಜ್ಯ ಘಟಕದ ಅಧ್ಯಕ್ಷರಿಗೆ ದೂರು ನೀಡಲಾಗುವುದು. ಹೊರಹಾಕುವವರೆಗೂ ಬಿಡುವುದಿಲ್ಲ’ ಎಂದು ಹೇಳಿದರು.

‘ನಾನು ಅಕ್ರಮ ಮಾಡಿದ್ದಿದ್ದರೆ ಬಯಲಿಗೆಳಿ. ವಿಧಾನ ಪರಿಷತ್ ಸದಸ್ಯನಿದ್ದೀಯಾ? ಕಾಂಗ್ರೆಸ್‌ ಜೊತೆಗೆ ಹೊಂದಾಣಿಕೆ ಇದೆ. ದಾಖಲೆ ಬಹಿರಂಗ ಪಡಿಸು. ನೀನು ಏನು ಮಾಡಿದ್ದೀಯಾ? ಎಲ್ಲೆಲ್ಲಿ ವಸೂಲಿ ಮಾಡಲಾಗುತ್ತದೆ ಎಂಬುದನ್ನು ದಾಖಲೆ ಸಮೇತ ಪಕ್ಷದ ವರಿಷ್ಠರಿಗೆ ನೀಡಲಾಗುವುದು’ ಎಂದರು.

ADVERTISEMENT

‘ನಾನು ರಾಜಕೀಯಕ್ಕೆ ಅನ್‌ಫಿಟ್ ಎಂದಿರುವುದು ನಿಜ. ನನಗೆ ಬಾರ್ ಆ್ಯಂಡ್ ರೆಸ್ಟೊರೆಂಟ್ ತೆಗೆದುಕೊಳ್ಳಲು ಬರುವುದಿಲ್ಲ. ಚೆಕ್‌ ಬೌನ್ಸ್ ಮಾಡಲು ಬರುವುದಿಲ್ಲ. ಬಿಟಿಡಿಎ ರದ್ದು ಮಾಡಿಸಲು ಬರುವುದಿಲ್ಲ. ಇಂತಹದ್ದಕ್ಕೆಲ್ಲ ಫಿಟ್‌ ಅಲ್ಲ. ಇದಕ್ಕೆಲ್ಲ ಅವನೇ ಫಿಟ್’ ಎಂದು ವ್ಯಂಗ್ಯವಾಡಿದರು.

‘170 ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ತುಳಿಸಿಗೇರಿಯ ಹನಮಪ್ಪನ ಗುಡಿ ಉದ್ಧಾರ ಮಾಡಲು ಆಗಿಲ್ಲ. ಮುಜರಾಯಿ ಇಲಾಖೆಗೆ ನಾನು ಶಾಸಕನಾಗಿದ್ದಾಗಲೇ ಸೇರಿಸಿದ್ದೇನೆ. ಎಸ್‌ಎಸ್‌ಎಲ್‌ಸಿ ಪಾಸಾಗಿದ್ದೇನೋ, ಇಲ್ಲವೋ ಎಂಬುದು ತೆಗೆದುಕೊಂಡು ನೀನೇನು ಮಾಡುತ್ತಿ. ಆರ್‌ಟಿಐನಲ್ಲಿ ಮಾಹಿತಿ ಪಡೆದುಕೊ ಗೊತ್ತಾಗುತ್ತದೆ’ ಎಂದರು.

‘ಆರ್‌ಎಸ್‌ಎಸ್‌ ಮಾತೃ ಸಂಸ್ಥೆ. ಕೇಳುವ ಹಕ್ಕು ಇದೆ. ಚೆಕ್‌ ಕೊಟ್ಟ ಮೇಲೆ ಅಕೌಂಟ್‌ನಲ್ಲಿ ಅಷ್ಟು ಹಣ ಇರುವಂತೆ ನೋಡಿಕೊಳ್ಳಬೇಕಲ್ಲವೇ? ಅಂಗಡಿ ಬಾಡಿಗೆ ಎಲ್ಲರಿಗೂ ಕೊಡುತ್ತೇನೆ. ಅರ್ಜಿ ಹಾಕು, ನಿನಗೂ ಕೊಡುವೆ. ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್‌ಗಾಗಿ ಹಾರಾಡುತ್ತಿದ್ದಾನೆ. ಬಿಜೆಪಿಯಲ್ಲಿದ್ದುಕೊಂಡೇ ಪ್ರತ್ಯೇಕ ಸಭೆ ಮಾಡುವಂತೆ ಯಾರು ತಿಳಿಸಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ರಾಜು ರೇವಣಕರ, ಶಿವಾನಂದ ಟವಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.