
ಜಮಖಂಡಿ: ಆರ್‌ಎಸ್ಎಸ್ ಕಾನೂನು ಬಾಹಿರ ನಡೆಯನ್ನು ವಿರೋಧಿಸಿ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಹಾಗೂ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಕುಟುಂಬಕ್ಕೆ ಸೂಕ್ತ ರಕ್ಷಣೆ ನಿಡಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರಬಣ) ಪದಾಧಿಕಾರಿಗಳು ತಾಲ್ಲೂಕು ಆಡಳಿತ ಸೌಧದ ಮುಂದೆ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ಭಾರತ ಸಂವಿಧಾನವನ್ನು ಗೌರವಿಸದ, ತನ್ನ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ, ಸ್ವತಂತ್ರ ಹೋರಾಟದಲ್ಲಿ ಭಾಗವಹಿಸದ, ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದ, ಅನಧಿಕೃತ ಆದಾಯದ ಮೂಲಗಳನ್ನು ಹೊಂದಿರುವ, ತೆರಿಗೆಯನ್ನು ಪಾವತಿಸಿದ, ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆರ್.ಎಸ್.ಎಸ್. ಸಂಘಟನೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
‘ಕೇಂದ್ರದಲ್ಲಿ ಬಿಜೆಪಿಯ ಮನುವಾದಿಗಳು ಅಧಿಕಾರಕ್ಕೆ ಬಂದ ನಂತರ ದಲಿತ ಸಮುದಾಯದ ಮೇಲಿನ ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರಗಳು ಹೆಚ್ಚಾಗುತ್ತಿವೆ. ದಲಿತ ಸಮುದಾಯವನ್ನು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದೆ ಬರುವಂತೆ ಪ್ರಯತ್ನ ಮಾಡುತ್ತಿದ್ದು, ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯುವ ಮೂಲಕ ದೇಶದ್ರೋಹ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಭಾರತದ ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಯನ್ನು ಸ್ವಾಗತಿಸಲು ಬರೆಯಲಾಗಿತ್ತು ಎಂದು ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಅಸಂಬದ್ದವಾಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ, ಪ್ರಗತಿಪರ ಚಿಂತಕ ಮಹಾಲಿಂಗಪ್ಪ ಆಲಬಾಳ, ಬಸವರಾಜ ದೊಡಮನಿ, ಸದಾಶಿವ ಐನಾಪೂರ, ಪರಸು ಕಾಂಬಳೆ, ಅಮೀತ ಸೂರಗೊಂಡ, ದೀಪಕ ಕಂಕನವಾಡಿ, ಅಪ್ಪಸಿ ಕಾಂಬಳೆ, ವಿದ್ಯಾಸಾಗರ ಹೊಸಮನಿ, ಶ್ಯಾಮರಾವ ಮಾದರ, ಚಿನ್ನಪ್ಪ ಬಂಡಿವಡ್ಡರ, ರವಿ ಸುತಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.