ADVERTISEMENT

ಬಾಗಲಕೋಟೆ | ಸಂವಿಧಾನ ಒಪ್ಪದ ಆರ್‌ಎಸ್ಎಸ್: ಜಕ್ಕಪ್ಪನವರ ವಾಗ್ದಾಳಿ

ಸಂವಿಧಾನದ ಶಕ್ತಿ ಅರಿತುಕೊಳ್ಳದಿದ್ದರೆ ಅಪಾಯ: ಜಕ್ಕಪ್ಪನವರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:13 IST
Last Updated 8 ಜನವರಿ 2026, 7:13 IST
ಬಾಗಲಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್ ಪುತ್ಥಳಿಯನ್ನು ಮಾಜಿ ಸಚಿವ ಎಸ್.ಆರ್. ಪಾಟೀಲ, ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಅನಾವರಣ ಮಾಡಿದರು
ಬಾಗಲಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್ ಪುತ್ಥಳಿಯನ್ನು ಮಾಜಿ ಸಚಿವ ಎಸ್.ಆರ್. ಪಾಟೀಲ, ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಅನಾವರಣ ಮಾಡಿದರು   
ಅಂಬೇಡ್ಕರ್ ಆದರ್ಶ ಪಾಲಿಸಿ | ಬಿಜೆಪಿ ಕಾರ್ಪೊರೇಟ್ ಕಂಪನಿಗಳ ಪರ ಅಂಬೇಡ್ಕರ್ ಸಮಾನತೆ ಹರಿಕಾರ

ಬಾಗಲಕೋಟೆ: ‘ಆರ್‌ಎಸ್‌ಎಸ್‌ ಎಂದೂ ಅಂಬೇಡ್ಕರ್ ರಚನೆಯ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಆದ್ದರಿಂದ ಅಂಬೇಡ್ಕರ್ ಬಗ್ಗೆ ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ ಕೇಳುವ ನೈತಿಕ ಹಕ್ಕಿಲ್ಲ. ಅವುಗಳಿಗೆ ಉತ್ತರ ನೀಡುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಎಐಸಿಸಿ ಎಸ್‌ಸಿ ಘಟಕದ ಸಂಯೋಜಕ ಎಫ್‌.ಎಚ್. ಜಕ್ಕಪ್ಪನವರ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣದ ನಂತರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್ ಮನುಸ್ಮೃತಿ ವಿರೋಧಿಸಿ, ಅದನ್ನು ಸುಟ್ಟಿದ್ದರು. ಕಾಂಗ್ರೆಸ್‌ ದಲಿತರ ವೈರಿ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಟೀಕಿಸಿದರು.

‘ಅಂಬೇಡ್ಕರ್ ಕಾಂಗ್ರೆಸ್‌ನಲ್ಲಿರಲಿಲ್ಲ. ಅವರು ಷೆಡ್ಯೂಲ್‌ ಕಾಸ್ಟ್‌ ಫೆಡರೇಷನ್‌ ಎಂಬ ಪಕ್ಷ ರಚಿಸಿದ್ದರು. ಕಾಂಗ್ರೆಸ್‌ ಕಚೇರಿಯಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದು ಅವರಿಗೆ ಕಾಣುವುದಿಲ್ಲ. ಸಮಾನತೆಯ ಹರಿಕಾರ ಪುತ್ಥಳಿ ಪ್ರತಿಷ್ಠಾಪಿಸಿರುವುದು ಸಂತಸ ತಂದಿದೆ’ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ‘ಸಂವಿಧಾನದಿಂದ ನಮಗೆ ಇಂದು ಉತ್ತಮ ಬದುಕು ದೊರೆತಿದೆ. ಸಂವಿಧಾನದ ಶಕ್ತಿಯ ಅರಿತುಕೊಳ್ಳದಿದ್ದರೆ ಮುಂದೆ ತೊಂದರೆಯಾಗಲಿದೆ. ಬಸವಣ್ಣ, ಅಂಬೇಡ್ಕರ್ ತತ್ವ, ಸಿದ್ಧಾಂತದಂತೆ ಆಡಳಿತ ನಡೆಸಿ, ಅವರ ಸಂದೇಶದ ಬಗ್ಗೆ ಅರಿವು ಮೂಡಿಸುವುದು ಕಾಂಗ್ರೆಸ್ ಧ್ಯೇಯವಾಗಿದೆ’ ಎಂದು ಹೇಳಿದರು.

‘ಬಿಜೆಪಿಯವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರು ತೆಗೆದುಹಾಕಿದ್ದಾರೆ. ಸಂವಿಧಾನ ತಿರುಚುವ ಕೆಲಸ ಮಾಡುತ್ತಿರುವ ಆ ಪಕ್ಷ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಜಾತಿ, ಧರ್ಮಗಳ ಮಧ್ಯೆ ಒಡಕು ಮೂಡಿಸಿ ಕೆಲಸ ಮಾಡದೇ ಆಡಳಿತ ನಡೆಸುತ್ತಿದೆ. ಮನುವಾದಿಗಳನ್ನು ಒಪ್ಪಿಕೊಂಡರೆ ಮುಂದಿನ ಸ್ಥಿತಿ ಹೇಗಿರುತ್ತದೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ‘ಅಂಬೇಡ್ಕರ್ ಅವರ ಆದರ್ಶ ಪಾಲಿಸಲು ಜನರಲ್ಲಿ ಅರಿವು ಮೂಡಿಸಬೇಕಿದೆ. ಅಂಬೇಡ್ಕರ್ ಅವರಿಗೆ ಸಹಕಾರ ನೀಡಿದ ನೆಹರೂ ರಾಜ್ಯಸಭೆಗೆ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟರು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ‘ಮಹಿಳೆಯರಿಗೆ ಸ್ವಾತಂತ್ರ್ಯ, ಅಧಿಕಾರ ನೀಡಿದವರು ಅಂಬೇಡ್ಕರ್. ಸಂವಿಧಾನ ಉಳಿದರೆ ದೇಶ ಸಮೃದ್ಧವಾಗಲಿದೆ’ ಎಂದರು.

ಪುತ್ಥಳಿ ನಿರ್ಮಿಸಲು ನೆರವು ನೀಡಿದ ಮುಖಂಡರಾದ ಪೀರಪ್ಪ ಮ್ಯಾಗೇರಿ, ಪ್ರೇಮನಾಥ ಗರಸಂಗಿ ಅವರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿತ ಅಧ್ಯಕ್ಷ ಅನಿಲಕುಮಾರ ದಡ್ಡಿ, ಯುವ ಮುಖಂಡ ಮಲ್ಲಿಕಾರ್ಜುನ ಮೇಟಿ, ದಯಾನಂದ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಬಿ.ಸೌದಾಗರ, ಡಾ.ಎಂ.ಎಚ್.ಚಲವಾದಿ, ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಎಸ್‌ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರಾ ಗುಳಬಾಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ, ಶಿವಾನಂದ ಮಾದರ ಇದ್ದರು.

ಇದಕ್ಕೂ ಮೊದಲು ನಡೆದ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾಜಿ ಸಚಿವ ಎಸ್‌.ಆರ್. ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡ ಉಮೇಶ ಮೇಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.