
ಗುಳೇದಗುಡ್ಡ: ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಅವರಿಗೆ ಬ್ಯಾಂಕ್ ಮೂಲಕ ಹಣಕಾಸಿನ ಸೌಲಭ್ಯ ದೊರಕಿಸಿಕೊಡುವ ವ್ಯವಸ್ಥೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಅಲ್ಲದೇ ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳಿಗೆ ಸುಮಾರು 1042 ಶಿಕ್ಷಕರ ನಿಯೋಜನೆ ಮಾಡಿ ಮಕ್ಕಳ ಕಲಿಕೆ ಪ್ರಗತಿಗೆ ನೆರವಾಗಿದೆ ಎಂದು ಬಾದಾಮಿ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಹದ್ಲಿ ಹೇಳಿದರು.
ಅವರು ಶುಕ್ರವಾರ ಹೊಸಪೇಟೆಯ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಕ್ಕಳ ಕಲಿಕೆಗೆ ನೆರವಾಗುವ ಉಪನ್ಯಾಸ ಹಾಗೂ ಮಕ್ಕಳಿಗೆ ಬೆಡ್‍ಶೀಟ್‍ಗಳನ್ನು ವಿತರಿಸಿ ಮಾತನಾಡಿ, ಮಕ್ಕಳು ಚೆನ್ನಾಗಿ ಕಲಿಯಲಿ ಎನ್ನುವ ಸದುದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಕ್ಕಳ ವಿದ್ಯಾಭ್ಯಾಸಕ್ಕೆ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿದೆ ಎಂದರು.
ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಐ.ಎಸ್.ಸರಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ಚಿಚಾರಕಿ ಪರವೀನ ಮುಜಾವರ, ಕೋಟೆಕಲ್ಲ ಮೇಲ್ವಿಚಾರಕ ಮಲ್ಲಿಕಾರ್ಜುನ ನಾಗಶೇಟ್ಟಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ರತ್ನಾ, ಸೇವಾ ಪ್ರತಿನಿಧಿ ಸುಮಿತ್ರಾ ತಾಂಡೂರ, ವಿ.ಜಿ.ಕರಡಿಗುಡ್ಡ, ಬಿ.ಎಸ್.ಗೌಡಪ್ಪನವರ, ಜೆ.ವಿ.ಬಡಿಗೇರ, ರೂಪಾ ಹಂಡಿ, ಪುಷ್ಪಾ ಗುರ್ಲಹೊಸೂರ, ಶಿವಲೀಲಾ ಬಾಗಲಕೋಟ, ಯಲ್ಲಪ್ಪ ಮನ್ನಿಕಟ್ಟಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.