
ಬಾಗಲಕೋಟೆ: ಜಿಲ್ಲಾಧಿಕಾರಿ ಕಚೇರಿ ಆವರಣ, ಲೋಕೋಪಯೋಗಿ ಇಲಾಖೆ ಆವರಣ, ತುಳಸಿಗೇರಿ ಗ್ರಾಮ ಪಂಚಾಯಿತಿ, ಗದ್ದನಕೇರಿ ಅರಣ್ಯ ಇಲಾಖೆ ಕಚೇರಿ ಆವರಣ.. ಹೀಗೆ ಸರ್ಕಾರಿ ಕಚೇರಿ ಆವರಣದಲ್ಲಿ ಬೆಳೆದಿರುವ ಶ್ರೀಗಂಧದ ಗಿಡಗಳು ಕಳುವಾಗಿವೆ.
ಸರ್ಕಾರಿ ಕಚೇರಿ ಆವರಣದಲ್ಲಿನ ಗಿಡಗಳಷ್ಟೇ ಅಲ್ಲ, ಜಿಲ್ಲೆಯಲ್ಲಿ ರೈತರು ಹೊಲಗಳಲ್ಲಿ ಬೆಳೆದಿರುವ ಗಿಡಗಳನ್ನು ಕಳ್ಳರು ರಾತ್ರೋರಾತ್ರಿ ಕಡಿದುಕೊಂಡು ಪರಾರಿಯಾಗುತ್ತಿದ್ದಾರೆ. ಸರ್ಕಾರಿ ಕಚೇರಿ ಆವರಣದಲ್ಲಿನ ಗಿಡಗಳನ್ನು ರಕ್ಷಿಸಿಕೊಳ್ಳಲಾರದ ಅಧಿಕಾರಿಗಳು, ರೈತರ ಹೊಲದಲ್ಲಿನ ಗಿಡಗಳನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ರೈತರದ್ದಾಗಿದೆ.
ಗಂಧದ ಗಿಡಗಳನ್ನು ಬೆಳೆದು ಒಂದಷ್ಟು ಆದಾಯ ಗಳಿಸಬಹುದು ಎಂದು ಜಿಲ್ಲೆಯ ವಿವಿಧೆಡೆ ರೈತರು ಗಂಧದ ಗಿಡಗಳನ್ನು ಬೆಳೆಯುತ್ತಿದ್ದಾರೆ. ಶ್ರೀಗಂಧದ ಗಿಡಗಳು ಕಟಾವಿಗೆ ಬರುವ ಮುನ್ನವೇ ಅವು ಕಳ್ಳರ ಪಾಲಾಗುತ್ತಿವೆ.
ಜಿಲ್ಲೆಯಲ್ಲಿ ಇತ್ತೀಚಿಗೆ ಗಂಧದ ಗಿಡಗಳ ಕಳ್ಳತನ ಹಾವಳಿ ಹೆಚ್ಚಾಗಿದೆ. ಈ ಮೊದಲು ಸರ್ಕಾರಿ ಭೂಮಿ, ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಗಂಧದ ಮರಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಇದೀಗ ರೈತರು ಜಮೀನಿನಲ್ಲಿ ಬೆಳೆದ ಶ್ರೀಗಂಧ ಕಳವು ಮಾಡಲು ಮುಂದಾಗಿದ್ದಾರೆ. ಇದರಿಂದ ಕಷ್ಟಪಟ್ಟು ದಶಕದಿಂದ ಬೆಳೆಸಿದ್ದ ಶ್ರೀಗಂಧದ ಗಿಡಗಳು ಕಳ್ಳರ ಪಾಲಾಗುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ರಕ್ಷಣೆಯೇ ಸವಾಲು: ರೈತರು ಅರಣ್ಯ ಕೃಷಿ ಮಾಡಲು ತಮ್ಮ ಜಮೀನುಗಳಲ್ಲಿ ಶ್ರೀಗಂಧದ ಸಸಿಗಳನ್ನು ನೆಟ್ಟು ಎಂಟತ್ತು ವರ್ಷಗಳ ಕಾಲ ಅವುಗಳನ್ನು ಜೋಪಾನ ಮಾಡಿ ಬೆಳೆಸಿದ್ದಾರೆ. ಕಟಾವಿಗೆ ಬರಲು ಇನ್ನು ನಾಲ್ಕಾರು ವರ್ಷಗಳು ಬೇಕಿವೆ. ಆದರೆ, ಅರೆ–ಬರೆ ಬೆಳೆದಿರುವ ಗಿಡಗಳನ್ನೇ ಕಳ್ಳರು ಕಡಿದುಕೊಂಡು ಹೋಗುತ್ತಿದ್ದಾರೆ. ಅವುಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿದೆ.
ಗಂಧದ ಗಿಡಗಳ ಸಂಖ್ಯೆ ಮಾಹಿತಿ ಇಲ್ಲ: ರೈತರು ಗಂಧದ ಗಿಡಗಳನ್ನು ಬೆಳೆಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿಲ್ಲ. ಆದರೆ, ಕಟಾವು ಮಾಡುವಾಗ ಮಾತ್ರ ಇಲಾಖೆಯ ಅನುಮತಿ ಪಡೆಯಬೇಕು. ಪರಿಣಾಮ ಇಲಾಖೆ ಅಧಿಕಾರಿಗಳ ಬಳಿಯೂ ಜಿಲ್ಲೆಯಲ್ಲಿರುವ ಗಂಧದ ಗಿಡಗಳ ವ್ಯಾಪ್ತಿ, ಸಂಖ್ಯೆ ಗೊತ್ತಿಲ್ಲ.
ಗಂಧದ ಗಿಡಗಳನ್ನು ಬೆಳೆಯುವ ರೈತರು ಉತಾರದಲ್ಲಿ ಗಂಧದ ಗಿಡಗಳನ್ನು ಬೆಳೆದಿರುವುದನ್ನು ನಮೂದು ಮಾಡಬೇಕು. ಇದರಿಂದ ಇಲಾಖೆಗೂ ಯಾರು, ಯಾರು ಬೆಳೆದಿದ್ದಾರೆ ಎಂಬುದು ಗೊತ್ತಾಗುತ್ತದೆ. ಕಟಾವಿಗೆ ತ್ವರಿತವಾಗಿ ಅನುಮತಿ ನೀಡಲು ಸಾಧ್ಯವಾಗುತ್ತದೆ.
ಜಿಲ್ಲೆಯಲ್ಲಿ ಎಷ್ಟು ಶ್ರೀಗಂಧದ ಮರಗಳು ಇವೆ ಎಂದು ಗೊತ್ತಿಲ್ಲ. ಉತಾರದಲ್ಲಿ ರೈತರು ಬೆಳೆದಿರುವುದನ್ನು ನಮೂದಿಸಿದರೆ ತ್ವರಿತವಾಗಿ ಕಡಿಯಲು ಅನುಮತಿ ನೀಡಲಾಗುವುದು. ಕಳ್ಳತನ ಪತ್ತೆಗೆ ಕ್ರಮಕೈಗೊಳ್ಳಲಾಗುವುದು–ರುಥ್ರೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಶ್ರೀಗಂಧ ಮರಗಳ ಕಳವು ಪ್ರಕರಣಗಳು ಗಮನಕ್ಕೆ ಬಂದಿವೆ. ಅರಣ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಳ್ಳರ ಪತ್ತೆ ಹಚ್ಚಲು ಸೂಚಿಸಲಾಗುವುದು–ಸಂಗಪ್ಪ, ಜಿಲ್ಲಾಧಿಕಾರಿ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.