ಕುಳಗೇರಿ ಕ್ರಾಸ್: ಸಮೀಪ್ ಕಾಕನೂರ ಗ್ರಾಮದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಕಳ್ಳರ ತಂಡವೊಂದು ಗ್ಯಾಸ್ ಕಟರ್ ಬಳಸಿ ಲಾಕರ್‌ಗಳನ್ನು ಒಡೆದು ಅಂದಾಜು ₹ 13.07 ಲಕ್ಷ ನಗದನ್ನು ದೋಚಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕಳ್ಳರು ಸುಮಾರು ಹತ್ತಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿಗೆ ಬಣ್ಣ ಸ್ಪ್ರೇ ಮಾಡಿ ಹಣ ದೋಚಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ಎದುರು ಇರುವ ಎಸ್‌ಬಿಐ ಶಾಖೆಯಲ್ಲಿ ಬುಧವಾರ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಬಂದು ಬೀಗ ತೆಗೆದು ಶಾಖೆಯ ಒಳಗೆ ಪ್ರವೇಶಿಸಿದಾಗ ಎದುರಿನ ಕಬ್ಬಿಣದ ಬಾಗಿಲು ಮುರಿದಿರುವುದು ಕಂಡು ಬಂತು. ಬ್ಯಾಂಕ್ ಸಿಬ್ಬಂದಿ ತಕ್ಷಣ ಶಾಖೆಯ ವ್ಯವಸ್ಥಾಪಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಬ್ಯಾಂಕ್ ವ್ಯವಸ್ಥಾಪಕ ಸಚಿನ್ ಗಾಯಕವಾಡ ಪರಿಶೀಲಿಸಿ ಬಾದಾಮಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಗ್ರಾಮದ ಸವದತ್ತಿ-ಪಟ್ಟದಕಲ್ ರಾಜ್ಯ ಹೆದ್ದಾರಿ 14ಕ್ಕೆ ಹೊಂದಿಕೊಂಡಿರುವ ಬ್ಯಾಂಕ್ ಶಾಖೆಯ ಹಿಂಬದಿಯಲ್ಲಿರುವ ಕಬ್ಬಿನ ಹೊಲದಿಂದ ಬಂದು ಕಳ್ಳರು ಏಣಿ ಹಾಗೂ ಗ್ಯಾಸ್ ಕಟರ್ ಬಳಸಿ ಒಳ ಬಂದಿದ್ದು, ಹಣದ ಲಾಕರನ್ನು ಮುರಿದಿದ್ದಾರೆ. ಚಿನ್ನಾಭರಣದ ಲಾಕರ್ ಮುರಿಯಲು ಕಳ್ಳರಿಗೆ ಸಾಧ್ಯವಾಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಜಿದ್ದಿ ಹಾಗೂ ಹುನಗುಂದ ವಲಯದ ಡಿವೈಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ ಭೇಟಿ ನೀಡಿದರು. ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಹನುಮಂತ ನರಳೆ ಬೆರಳಚ್ಚು ಅಧಿಕಾರಿಗಳು ಹಾಗೂ ಶ್ವಾನದಳದೊಂದಿಗೆ ತನಿಖೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.