ಬಾಗಲಕೋಟೆ: ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಬಂದ ಸಾವಿರಾರು ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ‘ಸ್ಕ್ಯಾನ್ ಪ್ರತಿ’ಗಾಗಿ ಶುಲ್ಕ ಪಾವತಿಸಿದ್ದರೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಶುಲ್ಕ ಪಾವತಿ ಪ್ರಕ್ರಿಯೆ ಯಶಸ್ವಿಯಾದ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಉತ್ತರ ಪತ್ರಿಕೆಯ ‘ಸ್ಕ್ಯಾನ್ ಪ್ರತಿ’ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರತಿ ವಿಷಯದ ‘ಸ್ಕ್ಯಾನ್ ಪ್ರತಿ’ಗೆ ₹530 ಶುಲ್ಕವಿದೆ. ಆನ್‌ಲೈನ್ ಇಲ್ಲವೇ ಚಲನ್ ಮೂಲಕ ಶುಲ್ಕ ಪಾವತಿಸಬಹುದು. ಕರ್ನಾಟಕ ಒನ್ ಸೆಂಟರ್ ಮೂಲಕ ಪಾವತಿಸಿದ ಹೆಚ್ಚಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
‘ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 8ರಿಂದ 13ರವರೆಗೆ ಮತ್ತು ಮರುಮೌಲ್ಯಮಾಪನ ಅಥವಾ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 12ರಿಂದ 17ರವರೆಗೆ ಅವಕಾಶವಿದೆ. ಆದರೆ, ಉತ್ತರ ಪತ್ರಿಕೆಗಳೇ ಲಭ್ಯವಾಗುತ್ತಿಲ್ಲ.
ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನ. ಅವಧಿ ವಿಸ್ತರಣೆ ಮಾಡಿರುವ ಬಗ್ಗೆ ಯಾವುದೇ ಸುತ್ತೋಲೆ ಬಂದಿಲ್ಲ.ಪ್ರಕಾಶ ಜೇವೂರ, ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ
‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಒಮ್ಮೆ ‘ಶುಲ್ಕ ಪಾವತಿ ಯಶಸ್ವಿಯಾಗಿದೆ, ಉತ್ತರ ಪತ್ರಿಕೆ ಅಪ್‌ಲೋಡ್ ಮಾಡಲಾಗುವುದು’ ಎಂಬ ಸಂದೇಶ ತೋರಿಸುತ್ತದೆ. ಕೆಲ ಹೊತ್ತಿನ ಬಳಿಕ ಉತ್ತರ ಪತ್ರಿಕೆ ಅಪ್‌ಲೋಡ್ ಆಗಿದೆಯೇ ಎಂದು ಪರಿಶೀಲಿಸಲು ಯತ್ನಿಸಿದಾಗ, ‘ಶುಲ್ಕ ಪಾವತಿ ಯಶಸ್ವಿಯಾಗಿಲ್ಲ’ ಎಂಬ ಸಂದೇಶ ಬರುತ್ತದೆ. ಯಾವುದನ್ನು ನಂಬಬೇಕು ಎಂಬುದು ಗೊತ್ತಾಗುತ್ತಿಲ್ಲ. ಕೊನೆ ದಿನಾಂಕ ಮುಗಿದರೆ ಏನು ಮಾಡುವುದು’ ಎಂದು ಸುಭಾಷ ಪಾಟೀಲ ಆತಂಕ ವ್ಯಕ್ತಪಡಿಸಿದರು.
‘ಶುಲ್ಕ ಪಾವತಿಯಾಗಿದೆ ಎಂದು ಕರ್ನಾಟಕ ಒನ್ ಸೆಂಟರ್ ಸಿಬ್ಬಂದಿ ಹೇಳುತ್ತಾರೆ. ರಸೀದಿಯನ್ನೂ ತೋರಿಸುತ್ತಾರೆ. ಸಮಸ್ಯೆಯನ್ನು ಪರೀಕ್ಷಾ ಮಂಡಳಿಯವರನ್ನೇ ಕೇಳಬೇಕು ಎನ್ನುತ್ತಾರೆ. ಪರೀಕ್ಷಾ ಮಂಡಳಿ ಸಂಪರ್ಕಕ್ಕೆ ಎರಡು ಸಂಖ್ಯೆಗಳನ್ನು ನೀಡಿದೆ. ಆದರೆ, ಮಂಡಳಿಯ ಸಿಬ್ಬಂದಿ ಸಂಪರ್ಕ ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.