ಕುಳಗೇರಿ ಕ್ರಾಸ್: ಹೋಬಳಿಯ ಗ್ರಾಮದ ಎಪಿಎಂಸಿ ಆವರಣದಲ್ಲಿ ನಡೆಯುವ ತರಕಾರಿ ಮಾರುಕಟ್ಟೆ ಸುಮಾರು 40 ವರ್ಷಗಳಿಂದ ಈ ಭಾಗದ ಪ್ರಮುಖ ಮಾರುಕಟ್ಟೆಯಾಗಿದೆ.
ಈ ಮೊದಲು ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆ ಬದಿಯಲ್ಲಿ ನಡೆಯುತ್ತಿತ್ತು ನಂತರದ ದಿನಗಳಲ್ಲಿ ಜನದಟ್ಟಣೆ ಹೆಚ್ಚಾದಂತೆಲ್ಲ ನೀರಾವರಿ ಇಲಾಖೆ ಆವರಣದಲ್ಲಿ ನಡೆಯಿತು. ನಂತರ ಗ್ರಾಮದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿದೆ.
ಆದರೆ ವಿಪರೀತ ದೂಳಿನಿಂದ ಸಮಸ್ಯೆಯಾಗುತ್ತಿದೆ. ಗ್ರಾ.ಪಂ. ಅಧಿಕಾರಿಗಳ ಹಾಗೂ ಸಂಬಂಧಿಸಿದ ಸದಸ್ಯರ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ಪರಿಣಾಮವಾಗಿ ಸಂತೆಯ ದಿನ ಏಳುವ ದೂಳು, ಸಮೀಪದ ನಿವಾಸಿಗಳ ಮನೆ, ತಯಾರಿಸಿದ ಆಹಾರದಲ್ಲಿ ಹಾಗೂ ಆಹಾರ ಧಾನ್ಯಗಳಲ್ಲಿ, ಒಗೆದು ಹಾಕಿದ ಬಟ್ಟೆಗಳ ಮೇಲೆ, ಚಾವಣಿ ಮೇಲೆ ಎಲ್ಲೆಂದರಲ್ಲಿ ಬಿದ್ದು ತೊಂದರೆಯಾಗಿದೆ.
ಇಲ್ಲಿನ ಮಾರುಕಟ್ಟೆಗೆ ಸುಮಾರು 24 ಹಳ್ಳಿಗಳ ಜನ ಪ್ರತಿ ಸೋಮವಾರ ಬರುತ್ತಾರೆ. ಮಂಗಳವಾರ ಬೆಳಗ್ಗೆ ಗ್ರಾ.ಪಂ. ಸಿಬ್ಬಂದಿ ತರಕಾರಿ ಮಾರುಕಟ್ಟೆ ಸ್ವಚ್ಛಗೊಳಿಸಲು ಬಂದ ಸಮಯದಲ್ಲಿ ವ್ಯಾಪಕವಾದ ದೂಳು ಎದ್ದು ಅಕ್ಕ-ಪಕ್ಕದ ಮನೆಗೆ ಬೀಳುತ್ತಿದೆ.
’ನರಗುಂದ, ರಾಮದುರ್ಗ, ಕೆರೂರು, ಶಿರೋಳ, ಕೊಣ್ಣೂರು, ನೀಲಗುಂದ, ಸೂರೇಬಾನ ಸೇರಿದಂತೆ ಕುಳಗೇರಿ ಹೋಬಳಿಯ ಸುತ್ತಲಿನ ಗ್ರಾಮಗಳ ತರಕಾರಿ ಬೆಳೆಯುವ ರೈತಾಪಿ ವರ್ಗದವರು ತರಕಾರಿ ಮಾರಾಟಕ್ಕೆ ಹಾಗೂ ನೂರಾರು ಸಂಖ್ಯೆಯ ಗ್ರಾಹಕರು ಖರೀದಿಸಲು ಬರುತ್ತಾರೆ.
ಬೆಳಗ್ಗೆ 9 ಗಂಟೆಗೆ ಮಾರುಕಟ್ಟೆಗೆ ಬರುವ ವರ್ತಕರು ಉಳಿದ, ಕೊಳೆತ ತಮ್ಮ ಮಾಲುಗಳನ್ನು ಅಲ್ಲಿಯೇ ಚೆಲ್ಲಿ ಹೋಗುತ್ತಿರುವುದರಿಂದ ತ್ಯಾಜ್ಯ ಘಟಕದಂತೆ ಪರಿವರ್ತನೆಯಾಗಿದೆ. ಗ್ರಾಹಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಕೂಡಾ ಉಂಟಾಗುತ್ತಿದೆ ಎಂದು ಶರಣು ಮೇಟಿ ಬೇಸರ ವ್ಯಕ್ತಪಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.