ಬಾಗಲಕೋಟೆ: ಮನುಷ್ಯನ ಗುರಿ ದೊಡ್ಡದಾಗಿದ್ದು, ಅದನ್ನು ಸಾಧಿಸಲು ಅಗತ್ಯವಿರುವ ಕೌಶಲಗಳು ಇದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ವಿದ್ಯಾಗಿರಿ ಬೈಪಾಸ್ ರಸ್ತೆಯಲ್ಲಿ ಉದ್ಯಮಿ ಪೀರಪ್ಪ ಮ್ಯಾಗೇರಿ ಅವರ ಬಾಲಾಜಿ ಪೆಟ್ರೋಲ್ ಬಂಕ್ ಶುಕ್ರವಾರ ಉದ್ಘಾಟಿಸಿದ ಅವರು, ‘ಹಿಡಿದ ಕೆಲಸ ಛಲ ಬಿಡದೆ ಮಾಡಿಸುವ ಹಠವಿರಬೇಕು. ಅಂಥ ಕೌಶಲ ಪೀರಪ್ಪ ಅವರಲ್ಲಿದೆ’ ಎಂದರು.
‘ಇಂದಿನ ಕೆಲ ಯುವ ಕಾರ್ಯಕರ್ತರಿಗೆ ತಮ್ಮ ನಾಯಕ ಗೆದ್ದ ಮೇಲೆ ಅವರೇ ಬಂದು ಮಾತನಾಡಿಸಬೇಕು, ಅವರೇ ಕೆಲಸ ಮಾಡಿಕೊಡಬೇಕು ಎಂಬ ನಿರೀಕ್ಷೆ ಇರುತ್ತದೆ. ಅದರ ಬದಲಾಗಿ ನಾಯಕನನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳಿಸಿಬೇಕು. ತಮ್ಮ ಬೆಳವಣಿಗೆ, ಗುರಿ ಕಡೆಗೆ ಗಮನ ಇರಬೇಕು’ ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ‘ದಲಿತ ಮುಖಂಡನೊಬ್ಬ ಕ್ಷಿಪ್ರವಾಗಿ ಬೆಳೆದು ನಿಂತು ಹತ್ತಾರು ಸಂಸ್ಥೆ, ಉದ್ಯಮ ಹುಟ್ಟುಹಾಕಿರುವುದು ನಿಜಕ್ಕೂ ಖುಷಿಯಾಗುತ್ತದೆ’ ಎಂದು ಹೇಳಿದರು.
ಉದ್ಯಮಿ ಪೀರಪ್ಪ ಮ್ಯಾಗೇರಿ ಮಾತನಾಡಿ, ‘ಕಡು ಬಡತನದಲ್ಲಿದ್ದಾಗ ನನಗೂ ಉದ್ಯಮಗಳನ್ನು ಸ್ಥಾಪಿಸಬೇಕೆಂದು ಅನಿಸುತಿತ್ತು. ಅದಕ್ಕಾಗಿ ಶ್ರಮ ಹಾಕಿ ತಕ್ಕಮಟ್ಟಿಗೆ ಜಯಕಂಡಿರುವೆ. ನನ್ನ ಬೆಳವಣಿಗೆಯ ಹಿಂದೆ ಎಸ್.ಆರ್. ಪಾಟೀಲ ಹಾಗೂ ಆರ್.ಬಿ. ತಿಮ್ಮಾಪುರ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾರೆ’ ಎಂದರು.
ಹುಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ, ಮುರನಾಳ ಮಳೆಯಪ್ಪಯ್ಯನಮಠದ ಗುರುನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಎಸ್ಪಿ ಅಮರನಾಥ ರೆಡ್ಡಿ, ಭಾರತ ಪೆಟ್ರೋಲಿಯಂ ಪ್ರಾದೇಶಿಕ ವ್ಯವಸ್ಥಾಪಕ ಸುರೇಶ ಅಲಾಟೆ, ಬೆಳಗಾವಿಯ ಬಿಪಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಅನುಕೃತಿ ದಾಸ್, ಮಾರಾಟ ಅಧಿಕಾರಿ ನಿಖಿಲ್ ಸಾಳುಂಕೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಆರ್.ಆರ್. ತುಂಬರಮಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.