ಬೀಳಗಿ: ‘ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಎಸ್.ಎಲ್. ಭೈರಪ್ಪ ಅವರು ಜನಮಾನಸದ ಚಿರಸ್ಥಾಯಿ ಆಗಿದ್ದಾರೆ’ ಎಂದು ಜಾನಪದ ವಿದ್ವಾಂಸ ಶ್ರೀರಾಮ ಇಟ್ಟಣ್ಣವರ ಹೇಳಿದರು.
ಇಲ್ಲಿನ ವಿಶ್ವಮಾನವ ಅಧ್ಯಯನ, ಧ್ಯಾನ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ಶನಿವಾರ ನಡೆದ ಎಸ್.ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
‘ಭೈರಪ್ಪ ಅವರು ಸೈದ್ಧಾಂತಿಕ ವಿರೋಧಿಗಳನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜ ಲೂತಿ ಮಾತನಾಡಿ, ‘ಸಾಂಪ್ರದಾಯಿಕ ಮನಸ್ಸಿನ ಭೈರಪ್ಪ ಅವರು ತಮ್ಮ ಬರವಣಿಗೆ ಮೂಲಕ ಎದುರಾಳಿಗಳಿಗೆ ಉತ್ತರ ನೀಡುತ್ತಿದ್ದರು. ಅವರ ಸಾಹಿತ್ಯ ಮೊನಚಾಗಿತ್ತು. ಪ್ರಾಮಾಣಿಕರಾಗಿದ್ದ ಅವರು, ಕನ್ನಡ ಸಾಹಿತ್ಯ ಲೋಕಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ’ ಎಂದರು.
ನಿವೃತ್ತ ಪ್ರಾಚಾರ್ಯ ಎಚ್.ಬಿ. ಧರ್ಮಣ್ಣವರ ಮಾತನಾಡಿ, ‘ಭೈರಪ್ಪ ಅವರ ಬಹುತೇಕ ಕೃತಿಗಳು ಸಂಶೋಧನಾತ್ಮಕವಾಗಿವೆ. ಸರಳವಾಗಿ ಜೀವನ ಸಾಗಿಸಿದ ಅವರ ಸಾಹಿತ್ಯದ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ, ಸಂವಾದ ಮತ್ತು ವಿಚಾರ ಸಂಕಿರಣ ಆಯೋಜಿಸಲಾಗುತ್ತದೆ. ಈ ಮೂಲಕ ಅವರನ್ನು ಸದಾ ಜೀವಂತವಾಗಿಡಬೇಕಿದೆ’ ಎಂದು ಹೇಳಿದರು.
ಸಿದ್ದರಾಮ ಶಿರೋಳ, ಆನಂದ ಬಾಬು, ಎಂ.ಜಿ. ಸೊಲ್ಲಾಪುರ, ವಿರೇಂದ್ರ ಶೀಲವಂತ, ಬಿ.ಎನ್. ಮುಂಡರಗಿ, ಜೋತಿಬಾ ಅವತಾಡೆ, ಎಸ್.ಎಂ. ಪಾನಶೆಟ್ಟಿ , ಜಿ.ಆರ್.ಹವೇಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.