
ಬಾಗಲಕೋಟೆ: ‘ದೇವಸ್ಥಾನದ ಮೂರ್ತಿ, ಕವಚಗಳನ್ನು ಮಾಡುವುದರಲ್ಲಿಯೇ ಖುಷಿ ಕಂಡುಕೊಂಡಿದ್ದೇನೆ. ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ’ ಎಂದು ಬೆಳ್ಳಿ ಮೂರ್ತಿ ಕೆತ್ತನೆ ಮಾಡುವ ನಾಗಲಿಂಗಪ್ಪ ಗಂಗೂರ ಹೇಳಿದರು.
ರಾಜ್ಯ ಸರ್ಕಾರ ನೀಡುವ 2025–26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಆರು ದಶಕಗಳಿಂದ ಮೂರ್ತಿ ಕೆತ್ತನೆ ಮಾಡಿಕೊಂಡು ಬಂದಿದ್ದೇನೆ. ರಾಜ್ಯ ಹಾಗೂ ಹೊರರಾಜ್ಯದ ದೇವಸ್ಥಾನಗಳಿಗೆ ಮೂರ್ತಿ, ಕವಚಗಳನ್ನು ಸಿದ್ಧಪಡಿಸಿಕೊಟ್ಟಿದ್ದೇನೆ. ಪ್ರಶಸ್ತಿ ನೀಡಿರುವುದು ಜವಾಬ್ದಾರಿ ಹೆಚ್ಚಿಸಿದೆ’ ಎಂದರು.
‘ಶಿಲ್ಪಕಲೆ ತಪಸ್ಸಿದ್ದಂತೆ. ದೇವರ ಮೂರ್ತಿ ಕೆತ್ತನೆಯಲ್ಲಿ ಸ್ವಲ್ಪವೂ ಅಪಚಾರವಾಗದಂತೆ ಮಾಡಬೇಕಾದ ಕಾರ್ಯ. ಇದೊಂದು ಪುಣ್ಯದ ಕಾರ್ಯ ಎಂದು ಮಾಡಿಕೊಂಡು ಬಂದಿದ್ದೇನೆ’ ಎಂದು ಸಂತಸ ಹಂಚಿಕೊಂಡರು.
ಪರಿಚಯ: ನಾಗಲಿಂಗಪ್ಪ ಅವರು ಬಾಗಲಕೋಟೆಯ ಗಂಗಪ್ಪ ಗಂಗೂರ ಹಾಗೂ ಸುಂದರಾಬಾಯಿ ಪುತ್ರರಾಗಿದ್ದಾರೆ. ಸಕ್ರಿ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿಯವರೆಗೆ ಅಧ್ಯಯನ ಮಾಡಿರುವ ಇವರು, ಗದಗಿನ ಆರ್ಟ್ಸ್ ಕಾಲೇಜಿನಲ್ಲಿ ಮಾಡಲ್ ಮತ್ತು ಜಿ.ಟಿ. ಆರ್ಟ್ ಪೂರ್ಣಗೊಳಿಸಿದ್ದಾರೆ.
ಯಲಗೂರು, ಅಚನೂರ, ಮುಚಖಂಡಿ, ನವಲಿ ಜಡೆಶಂಕರಲಿಂಗ, ಕೂಡಲಸಂಗಮದ ಸಂಗಮನಾಥ, ಶಕ್ತಿನಗರ ಸೂಗುರೇಶ್ವರ ದೇವಸ್ಥಾನ, ಮಂತ್ರಾಲಯದ ರಥ ನಿರ್ಮಾಣ ಮಾಡಿದ್ದಾರೆ. ಹಲವು ದೇವಸ್ಥಾನಗಳ ಬಾಗಿಲು ಚೌಕಟ್ಟು ಸಹ ಮಾಡಿದ್ದಾರೆ. ನೂರಾರು ದೇವಸ್ಥಾನಗಳಿಗೆ ಮೂರ್ತಿ ಸೇವೆ ಮಾಡಿದ ಕೀರ್ತಿ ಇವರದ್ದಾಗಿದೆ.
ಜಿಲ್ಲಾಡಳಿತದಿಂದ ರಾಜ್ಯೋತ್ಸವ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ರಾಜ್ಯ ಚಿನ್ನ–ಬೆಳ್ಳಿ ಕೆಲಸಗಾರರ ಫೆಡರೇಷನ್ ವತಿಯಿಂದ ಸ್ವರ್ಣಶ್ರೀ ಪ್ರಶಸ್ತಿ ದೊರೆತಿದೆ.
ಈ ವಿಶಿಷ್ಟ ಕಲೆಯನ್ನು ತಮ್ಮ ಇಬ್ಬರೂ ಮಕ್ಕಳಿಗೆ ಕಲಿಸಿರುವ ಅವರು, ವಿಶ್ವಕರ್ಮ ಸಮಾಜದ ಬಡ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.