ADVERTISEMENT

ಬಾಗಲಕೋಟೆ | ವರ್ಷದ ದುಡಿಮೆ ಬೆಂಕಿಗೆ ಆಹುತಿ: ರೈತರ ಅಳಲು

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಲಿ

ಬಸವರಾಜ ಹವಾಲ್ದಾರ
Published 14 ನವೆಂಬರ್ 2025, 23:35 IST
Last Updated 14 ನವೆಂಬರ್ 2025, 23:35 IST
ಬಾಗಲಕೋಟೆ ಜಿಲ್ಲೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬೆಂಕಿಗೆ ಆಹುತಿಯಾಗಿರುವ ಟ್ರ್ಯಾಕ್ಟರ್
ಬಾಗಲಕೋಟೆ ಜಿಲ್ಲೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬೆಂಕಿಗೆ ಆಹುತಿಯಾಗಿರುವ ಟ್ರ್ಯಾಕ್ಟರ್   

ಬಾಗಲಕೋಟೆ: ‘ಬೆಳಗಾವಿ ಜಿಲ್ಲೆಯವರಾಗಿದ್ದರೂ ಹತ್ತಾರು ವರ್ಷಗಳಿಂದ ಈ ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದೇವೆ. ಕಬ್ಬಿಗೆ ಬೆಂಕಿ ಹಚ್ಚಿರುವುದರಿಂದ ಶೇ 30ರಷ್ಟು ಇಳುವರಿ ಕಡಿಮೆಯಾಗಿದೆ. ಕೈಸೇರಬೇಕಿದ್ದ ಲಾಭ ಬೆಂಕಿಗೆ ಆಹುತಿಯಾಯಿತು. ಕುಟುಂಬ ನಿರ್ವಹಿಸುವುದು ಹೇಗೆ’ ಎಂದು ಕೌಜಲಗಿಯ ಸಿದ್ದಪ್ಪ ಬಿಸಗುಪ್ಪಿ ಆತಂಕ ವ್ಯಕ್ತಪಡಿಸಿದರು.

ಮಹಾಲಿಂಗಪುರ ಸಮೀಪದ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್‌ ಮತ್ತು ಕಬ್ಬಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ನಷ್ಟಕ್ಕೆ ಒಳಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು ನೋವು ತೋಡಿಕೊಂಡರು.

‘ಏಕಾಏಕಿ ಒಳ ನುಗ್ಗಿದವರೇ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಓಡಿ ಹೋದರು. ಏನಾಗುತ್ತದೆ ತಿಳಿಯುವಷ್ಟರಲ್ಲಿ ಬೆಂಕಿ ವ್ಯಾಪಿಸಿತು. ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ಕಾರ್ಖಾನೆ ಸಿಬ್ಬಂದಿ ನೀರು ಹಾಕಿ ನಂದಿಸಿದ್ದರಿಂದ, ಒಂದಷ್ಟು ಕಬ್ಬು ಉಳಿದಿದೆ’ ಎಂದರು.

ADVERTISEMENT

‘ಸಾಲ ಮಾಡಿ ಕಬ್ಬು ಬೆಳೆದಿದ್ದೇವೆ. ನಿನ್ನೆ ನಡೆದ ಬೆಂಕಿ ಘಟನೆಯಲ್ಲಿ ನಮ್ಮಣ್ಣನಿಗೆ ಗಾಯವಾಗಿದೆ. ಜೀವಕ್ಕೆ ಹಾನಿಯಾಗಿದ್ದರೆ ಯಾರು ಹೊಣೆ? ಕಾರ್ಖಾನೆಯವರು ಹೇಳಿದ ದರ ಒಪ್ಪಿಕೊಂಡೇ ಕಬ್ಬು ತಂದಿದ್ದೆವು. ಟ್ರ್ಯಾಕ್ಟರ್‌ಗಳನ್ನು ಸುಡುವುದರಿಂದ ಯಾರಿಗೆ ಲಾಭ ಎನ್ನುವುದನ್ನು ಸುಟ್ಟವರು ಯೋಚಿಸಬೇಕು’ ಎಂದು ಮುನಿಹಾಳದ ಸಿದ್ದಾರೂಢ ಹೇಳಿದರು.

‘ಕಲ್ಲು ತೂರಾಟ ಆರಂಭವಾಗಿದ್ದರಿಂದ ಜೀವ ಉಳಿಸಿಕೊಳ್ಳಲು ಕಬ್ಬು ಹೇರಿದ್ದ ಟ್ರ್ಯಾಕ್ಟರ್‌ಗಳನ್ನು ಬಿಟ್ಟು ಓಡಿ ಹೋದೆವು. ಕಬ್ಬು ಕಟಾವು ಗ್ಯಾಂಗ್‌ನವರಿಗೆ ₹70 ಲಕ್ಷ ಮುಂಗಡ ನೀಡಲಾಗಿದೆ. ವಿಳಂಬವಾಗಿ ಅವರು ಹೊರಟು ಹೋದರೆ ಏನು ಮಾಡುವುದು. ಸುಟ್ಟಿರುವ ಟ್ರ್ಯಾಕ್ಟರ್ ದುರಸ್ತಿ ಹೇಗೆ ಮಾಡಿಸುವುದು ತಿಳಿಯುತ್ತಿಲ್ಲ’ ಎಂದು ಹಂದಿಗುಂದದ ಶ್ರೀಶೈಲ ಚೌಗಲಾ ತಿಳಿಸಿದರು.

‘₹8.50 ಲಕ್ಷ  ಸಾಲ ಮಾಡಿ ಟ್ರ್ಯಾಕ್ಟರ್ ತಂದಿದ್ದೇನೆ. ಕಣ್ಮುಂದೆಯೇ ಆ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಟೈರ್ ಸುಟ್ಟಿದೆ. ಕಬ್ಬಿಗೂ ಬೆಂಕಿ ತಗುಲಿದೆ’ ಎಂದರು.

ಮಾನವೀಯತೆ ಆಧಾರದ ಮೇಲೆ ಗೋದಾವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೇ ರೈತರ ನಷ್ಟ ಭರಿಸಲು ಮುಂದಾಗಿದೆ.
– ಶ್ವೇತಾ ಬೀಡಿಕರ, ಉಪವಿಭಾಗಾಧಿಕಾರಿ ಜಮಖಂಡಿ

ಹಾನಿ ಭರಿಸಲು ಮುಂದಾದ ಸಕ್ಕರೆ ಕಾರ್ಖಾನೆ

ಬಾಗಲಕೋಟೆ: ಜಿಲ್ಲೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬೆಂಕಿಯಿಂದ ಹಾನಿಯಾಗಿದ್ದ ವಾಹನಗಳ ಹಾಗೂ ಕಬ್ಬಿನ ಹಾನಿಯನ್ನು ಭರಿಸಲು ಗೋದಾವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮುಂದಾಗಿದೆ.

ಸಾರಿಗೆ ಇಲಾಖೆ ಪ್ರಕಾರ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ಸೇರಿ 42 ವಾಹನಗಳಿಗೆ ಬೆಂಕಿ ತಗಲಿದ್ದು ₹25.68 ಲಕ್ಷ ಹಾನಿಯಾಗಿದೆ. ಕೃಷಿ ಇಲಾಖೆ ಪ್ರಕಾರ 96 ಟ್ರೇಲರ್‌ಗಳಲ್ಲಿದ್ದ 1,003 ಟನ್‌ ಕಬ್ಬು ಸುಟ್ಟಿದೆ. ಇದರಿಂದ ₹34.08 ಲಕ್ಷ ಹಾನಿಯಾಗಿದೆ ಎಂದು ವರದಿ ಸಲ್ಲಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.