ಬಾಗಲಕೋಟೆ: ಕಬ್ಬು ಕಟಾವು ಜಿಲ್ಲೆಯಲ್ಲಿ ಜೋರಾಗಿ ನಡೆದಿದೆ. ನಂತರ ಉಳಿಯುವ ಕಬ್ಬಿನ ರವದಿಯನ್ನು ಅಲ್ಲಲ್ಲಿ ಸುಡಲಾಗುತ್ತಿದೆ. ಇದರಿಂದ ಪರಿಸರ ಹಾನಿಯ ಜೊತೆಗೆ, ಮುಂದಿನ ಇಳುವರಿ ಮೇಲೂ ಹೊಡೆತ ಬೀಳಲಿದೆ.
ಕಬ್ಬಿನ ರವದಿ ಸುಡುವುದರಿಂದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮ ಜೀವಿಗಳ ಚಟುವಟಿಕೆ ಕಡಿಮೆ ಆಗುತ್ತದೆ. ರೈತ ಮಿತ್ರ ಕೀಟಗಳು ನಾಶವಾಗುತ್ತವೆ. ಇದರಿಂದ ಹಾನಿಕಾರಕ ಕೀಟಗಳು ಇನ್ನಷ್ಟು ಹೆಚ್ಚು ಹಾನಿ ಮಾಡುತ್ತವೆ. ಹೀಗಾಗಿ ಸಸ್ಯ ಸಂರಕ್ಷಣೆಯ ವೆಚ್ಚ ಹೆಚ್ಚಾಗುತ್ತದೆ ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಮತ.
ಬೆಂಕಿ ಹಚ್ಚುವುದರಿಂದ ಮಣ್ಣಿನಲ್ಲಿ ನೀರು ಆವಿಯಾಗುವ ಪ್ರಮಾಣ ಹೆಚ್ಚಾಗುತ್ತದೆ. ರೈತರಿಗೆ ನೀರಾವರಿಯ ವೆಚ್ಚ ಹೆಚ್ಚಾಗುತ್ತದೆ. ಕಳೆಗಳ ಸಂಖ್ಯೆ ಹೆಚ್ಚಾಗಿ, ಕಳೆ ನಿರ್ವಹಣಾ ವೆಚ್ಚ ಏರಿಕೆಯಾಗುತ್ತದೆ. ಕಬ್ಬಿನ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆ.
ದೊಡ್ಡ ಪ್ರಮಾಣದಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿಲ್ಲ. ಜತೆಗೆ ರವದಿಗೆ ಬೆಂಕಿ ಹಚ್ಚುವ ರೈತರ ವಿರುದ್ಧ ಕ್ರಮಗೈಗೊಳ್ಳುವ ಅವಕಾಶ ಕಲ್ಪಿಸಬೇಕು. ಆಗಲೇ ಬೆಂಕಿ ಹಚ್ಚುವ ರೈತರ ಕಾರ್ಯಕ್ಕೆ ಕಡಿವಾಣ ಹಾಕಬಹುದಾಗಿದೆ.
ಉಪಯೋಗ: ಕಬ್ಬಿನ ರವದಿಯನ್ನು ಹೊಲದಲ್ಲಿ ಹಾಗೆ ಬಿಟ್ಟರೆ ಮಣ್ಣಿನ ತಾಪಮಾನ ಏರುಪೇರಾಗುವುದಿಲ್ಲ. ತೇವಾಂಶ ಆವಿಯಾಗುವುದು ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮ ಜೀವಿಗಳ ಚಟುವಟಿಕೆ ಹೆಚ್ಚುತ್ತದೆ. ರೈತ ಮಿತ್ರ ಕೀಟಗಳು ಹೆಚ್ಚಾಗುತ್ತವೆ. ಮಣ್ಣಿನಲ್ಲಿ ನೀರು ಇಂಗುವಿಕೆ ಹೆಚ್ಚಿಸುತ್ತದೆ. ಮಣ್ಣಿನಲ್ಲಿ ಸಾವಯವ, ಇಂಗಾಲ ಮತ್ತು ಫಲವತ್ತತೆ ಹೆಚ್ಚುತ್ತದೆ. ಕಬ್ಬಿನ ಇಳುವರಿ ಹೆಚ್ಚಾಗಲೂ ಕಾರಣವಾಗುತ್ತದೆ.
ಕಬ್ಬಿನ ರವದಿಯು ಸಾವಯವ ಸಂಪನ್ಮೂಲವಾಗಿದ್ದು, ಅದನ್ನು ಸುಟ್ಟು ಹಾಳು ಮಾಡದೇ, ಜಮೀನಿನ ಮೇಲೆ ಹೊದಿಕೆಯಾಗಿ ಬಳಸಬೇಕು. ಇದು ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಕಬ್ಬಿನ ಇಳುವರಿ ಹೆಚ್ಚಿಸುತ್ತದೆ. ಕಬ್ಬಿನ ರವದಿಯನ್ನು ಸುಡದೇ ಯಂತ್ರಗಳ ಮೂಲಕ ತುಂಡರಿಸಿ ಉಪಯೋಗಿಸಿದರೆ, ಮಣ್ಣಿನ ಇಳುವರಿ ಹೆಚ್ಚುತ್ತದೆ.
ಪ್ರತಿ ಎಕರೆಯಲ್ಲಿ ಸಿಗುವ ಕಬ್ಬಿನ ರವದಿಯನ್ನು ಭೂಮಿಯಲ್ಲಿ ಸೇರಿಸಿದರೆ ರಾಸಾಯನಿಕ ಗೊಬ್ಬರದ ಹೆಚ್ಚುವರಿ ಖರ್ಚು ಉಳಿಯುತ್ತದೆ. ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಟ್ಟರೆ ಇಂಗಾಲ, ವಿಷಕಾರಕ ಅನಿಲಗಳು ವಾತಾವರಣಕ್ಕೆ ಸೇರುತ್ತವೆ.
‘ಕಬ್ಬಿನ ರವದಿ ಸುಡದಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಳ್ಳಿಗಳಲ್ಲಿ ಹಲವು ರೈತರನ್ನು ಒಂದೆಡೆ ಸೇರಿಸಿ ತಿಳಿವಳಿಕೆ ನೀಡಲಾಗಿದೆ. ಕರಪತ್ರಗಳನ್ನೂ ಮುದ್ರಿಸಿ ಹಂಚಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.