ತೇರದಾಳ: ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬಿಗೆ ಈಗ ಗೊಣ್ಣೆ ಹುಳುವಿನ ಬಾಧೆ ಆರಂಭವಾಗಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಆತಂಕ ಮನೆ ಮಾಡಿದೆ.
ಇನ್ಣೇನು ಕಬ್ಬು ನುರಿಸಲು ಕಾರ್ಖಾನೆಗಳು ತಯಾರಿಯಲ್ಲಿದ್ದು, ಬೆಳೆದ ಕಬ್ಬನ್ನು ಕಳುಹಿಸಿ ಉತ್ತಮ ಆದಾಯ ಪಡೆಯುವ ಆಸೆ ರೈತರದ್ದಾದರೆ ಕೆಲವು ರೈತರ ಕಬ್ಬಿಗೆ ಗೊಣ್ಣೆ ಹುಳು ಬಾಧೆ ಆರಂಭವಾಗಿ ಬೆಳೆದು ನಿಂತ ಕಬ್ಬು ಒಣಗುತ್ತಿದೆ. ಇದರಿಂದ ಸಹಜವಾಗಿಯೇ ರೈತರು ನಷ್ಟ ಅನುಭವಿಸಲಿದ್ದಾರೆ. ನೈಸರ್ಗಿಕವಾಗಿ ಆಗಾಗ ಕಾಣಿಸಿಕೊಳ್ಳುವ ಈ ಹುಳು ಕಬ್ಬಿನ ಬೇರನ್ನು ಕತ್ತರಿಸುವ ಮೂಲಕ ಅದು ಒಣಗಿ ಹೋಗುವಂತೆ ಮಾಡುತ್ತದೆ. ಇದರಿಂದ ಅದರ ಬಿತ್ತನೆಗೆ ಮಾಡಿದ ಖರ್ಚು ಕೂಡ ಬರದೇ ಹಾನಿಯಾಗುತ್ತದೆ.
ತಾಲ್ಲೂಕಿನ ಸಸಾಲಟ್ಟಿ ಭಾಗದಲ್ಲಿ ಈ ಬಾರಿ ಬಾಧೆ ಕಾಣಿಸಿಕೊಂಡಿದ್ದು, 30 ಎಕರೆಗೂ ಹೆಚ್ಚು ಕಬ್ಬು ನಾಶವಾಗಿದೆ ಎಂದು ಕೃಷಿ ಅಧಿಕಾರಿಗಳಿಂದ ತಿಳಿದು ಬಂದಿದೆ. ಕಬ್ಬು ನಾಟಿ ಮಾಡಿದ ಹಲವು ದಿನಗಳ ಬಳಿಕ ಕಾಣಿಸಿಕೊಳ್ಳುವ ಈ ಹುಳು, ಬೆಳೆಯ ಬೇರು ಕತ್ತರಿಸುವ ಸಲುವಾಗಿ ಅದರ ಹತ್ತಿರ ಅಂದರೆ ಮಣ್ಣಿನಡಿ ಹುದುಗಿಕೊಂಡಿರುವುದರಿಂದ ಅದರ ಇರುವಿಕೆ ಮೊದಲು ರೈತರಿಗೆ ಗೊತ್ತಾಗುವುದಿಲ್ಲ. ಕ್ರಮೇಣ ಬೆಳೆ ಒಣಗಲಾರಂಭಿಸಿದಾಗ ಕೀಟನಾಶಕದಂತಹ ದ್ರಾವಣವನ್ನು ಉಣಿಸಿದರೂ ಕೂಡ ಅದರಾಳಕ್ಕೆ ತಲುಪುವ ಖಾತ್ರಿ ಇರುವುದಿಲ್ಲ. ಅದು ಬಹಳ ದಿನಗಳ ಕಾಲ ಜೀವಿಸುವುದರಿಂದ ಬೆಳೆ ನಾಶಮಾಡಿಯೇ ಅಲ್ಲಿಂದ ಹೋಗುತ್ತದೆ. ಇಲ್ಲವೇ ಸಾಯಲೂಬಹುದು ಎಂಬುದು ರೈತರೊಬ್ಬರ ಅನಿಸಿಕೆ.
‘ಸಸಾಲಟ್ಟಿಯ ಅನೇಕ ರೈತರು ಈ ಗೊಣ್ಣೆ ಹುಳುವಿನಿಂದ ತೊಂದರೆ ಅನುಭವಿಸುತ್ತಿದ್ದರೂ ಕೂಡ ತಮ್ಮದೇ ಶೈಲಿಯ ಕೀಟನಾಶಕ ಬಳಸುತ್ತ ಸುಮ್ಮನಿದ್ದಾರೆ. ಆದರೆ ನಾನು, ಅಲ್ಲಪ್ಪ ಹಾದಿಮನಿ ಹಾಗೂ ಪರಪ್ಪ ಖಾನಗೌಡರ ಸೇರಿದಂತೆ ಕೆಲವು ರೈತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದೇವೆ. ಈ ಹುಳುವಿನಿಂದ ಹಲವು ಕಬ್ಬು ಒಣಗಿದ್ದು, ನಷ್ಟವಾಗಿದೆ. ಸರ್ಕಾರ ಕಬ್ಬನ್ನು ಸಹ ಬೆಳೆ ಹಾನಿ ವ್ಯಾಪ್ತಿಗೆ ಪರಿಗಣಿಸಿ ಪರಿಹಾರ ನೀಡಿದರೆ ಅನುಕೂಲವಾದೀತು’ ಎನ್ನುತ್ತಾರೆ ಸಸಾಲಟ್ಟಿಯ ರೈತ ಮುಖಂಡ ಯಲ್ಲಪ್ಪ ಮುಶಿ.
ಇದಕ್ಕೆ ಪರಿಹಾರ ಬಯಸಿ ಎರಡು ತಿಂಗಳ ಹಿಂದೆಯೇ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಕೀಟನಾಶಕ ಕೇಳಲು ಬಂದಿದ್ದರು. ಆದರೆ ಅದರ ಕೊರತೆ ಇದ್ದುದ್ದರಿಂದ ಬರಿಗೈಲಿ ಮರಳಿದ ಅವರಲ್ಲಿ ಕೆಲವರು ತೇರದಾಳ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು. ಅಲ್ಲಿಂದ ಈಗ ಅದರ ಸರ್ವೆ ನಡೆದು, ಕೀಟನಾಶಕ ದ್ರಾವಣ ಕೂಡ ಸಿಗುವಂತಾಗಿದೆ. ಆದರೆ ಕಾಲ ಮಿಂಚಿ ಹೋಗಿದ್ದು ಅಂದಾಜು 40 ಎಕರೆಗೂ ಅಧಿಕ ಬೆಳೆ ಒಣಗಿದೆ.
‘ನಾಟಿಗೆ ಮೊದಲೇ ಕೀಟನಾಶಕ ಬಳಸಬೇಕಿತ್ತು’
‘ರೈತರು ಕಬ್ಬು ನಾಟಿ ಮಾಡುವ ಮೊದಲೇ ಅಂದರೆ ಹೊಲಕ್ಕೆ ತಿಪ್ಪೆ (ಕೊಟ್ಟಿಗೆ) ಗೊಬ್ಬರ ಹಾಕುವ ವೇಳೆ ಮೆಟಾಯಿರೈಜಮ್ ಎಂಬ ಜೈವಿಕ ಕೀಟನಾಶಕವನ್ನು ಮಿಶ್ರಣ ಮಾಡಿ ನೀಡಿದ್ದಾದರೆ ಈ ಹುಳುವಿನ ಬಾಧೆ ಇರದು. ತಾಲ್ಲೂಕಿನ ಸಸಾಲಟ್ಟಿಯ ಕಬ್ಬು ಬೆಳೆದ ಜಮೀನುಗಳಿಗೆ ಈ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ರೈತರು ತಹಶೀಲ್ದಾರರಿಗೆ ನೀಡಿದ ಮನವಿ ಪತ್ರವನ್ನು ಕೂಡ ಕಳುಹಿಸಲಾಗಿದೆ’ ಎಂದು ತೇರದಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್.ಎಂ. ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.