ADVERTISEMENT

ಆಂಧ್ರದ ಶ್ರೀಶೈಲದಲ್ಲಿ ಸ್ಥಳೀಯರು-ಕನ್ನಡಿಗರ ಘರ್ಷಣೆ: ಬಾಗಲಕೋಟೆ ಯುವಕನ ಕೊಲೆ?

200ಕ್ಕೂ ಹೆಚ್ಚು ವಾಹನಗಳು ಧ್ವಂಸ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 5:25 IST
Last Updated 31 ಮಾರ್ಚ್ 2022, 5:25 IST
ಶ್ರೀಶೈಲದಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ಕರ್ನಾಟಕದ ಯುವಕ ಶ್ರೀಶೈಲ ವಾರಿಮಠ
ಶ್ರೀಶೈಲದಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ಕರ್ನಾಟಕದ ಯುವಕ ಶ್ರೀಶೈಲ ವಾರಿಮಠ   

ಬಾಗಲಕೋಟೆ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀಶೈಲದಲ್ಲಿ ಬುಧವಾರ ತಡರಾತ್ರಿ ವ್ಯಾಪಕ ಹಿಂಸಾಚಾರ ನಡೆದಿದೆ.

ಕರ್ನಾಟಕದಿಂದ ತೆರಳಿದ್ದ ಪಾದಯಾತ್ರಿಗಳು ಹಾಗೂ ಸ್ಥಳೀಯ ವ್ಯಾಪಾರಸ್ಥರ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಜಾನಮಟ್ಟಿ ನಿವಾಸಿ ಶ್ರೀಶೈಲ ವಾರಿಮಠ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಮಾಹಿತಿಯನ್ನು ಶ್ರೀಶೈಲ ವ್ಯಾಪಿಯಕರ್ನೂಲ್ ಜಿಲ್ಲಾ ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಘರ್ಷಣೆಯಲ್ಲಿ ಕರ್ನಾಟಕದಿಂದ ತೆರಳಿದ್ದ 200ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸ ಮಾಡಲಾಗಿದೆ. ಪೊಲೀಸ್ ಬ್ಯಾರಿಕೇಡ್‌ಗೆ ಬೆಂಕಿ ಹಚ್ಚಲಾಗಿದೆ. ಕರ್ನಾಟಕದ ಧ್ವಜವನ್ನು ಸುಟ್ಟು ಹಾಕಲಾಗಿದೆ ಎಂದು ತಿಳಿದುಬಂದಿದೆ.

ADVERTISEMENT

'ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಾಟ ಮಾಡುತ್ತಿರುವುದನ್ನು ಪಾದಯಾತ್ರಿಗಳು ಪ್ರಶ್ನಿಸಿದ್ದು ಜಗಳಕ್ಕೆ ಕಾರಣವಾಗಿದೆ. ಈ ವೇಳೆ ಎಳನೀರು ಕೊಚ್ಚುವ ಮಚ್ಚಿನಿಂದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿದ ಕರ್ನಾಟಕದ ಯಾತ್ರಿಗಳು ಪ್ರತಿಭಟನೆಗೆ ಮುಂದಾಗಿದ್ದು ಗಲಭೆಗೆ ತಿರುಗಿತು' ಎಂದು ಶ್ರೀಶೈಲಕ್ಕೆ ತೆರಳಿರುವ ಬಾಗಲಕೋಟೆಯ ಅಕ್ಷಯ ಹೋಟೆಲ್ ವ್ಯವಸ್ಥಾಪಕ ದೇವೇಂದ್ರ ಬಸಾಕಳಿ ಪತ್ರಿಕೆಗೆ ತಿಳಿಸಿದರು.

ಗಲಭೆಯ ವೇಳೆ ಸ್ಥಳೀಯ ಅಂಗಡಿಗಳ ಮೇಲೂ ದಾಳಿ ನಡೆದಿದೆ. ಮೊದಲು ಶ್ರೀಶೈಲದ ರಥ ಬೀದಿಯಲ್ಲಿ ಗಲಾಟೆ ಆರಂಭವಾಯಿತು. ನಂತರ ಎಲ್ಲ ಕಡೆಯೂ ವ್ಯಾಪಿಸಿತು. ಮೊದಲಿಗೆ ಬೆರಳೆಣಿಕೆಯಷ್ಟು ಪೊಲೀಸರು, ಗೃಹ ರಕ್ಷಕದಳದವರು ಸ್ಥಳದಲ್ಲಿದ್ದರು. ನಂತರ ಹೆಚ್ಚಿನ ಪೊಲೀಸರನ್ನು ಕರೆಸಲಾಯಿತು. ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶ್ರೀಶೈಲದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

'ನಾವು ದೇವಸ್ಥಾನದ ಸಮೀಪದ ವಸತಿ ಗೃಹವೊಂದರಲ್ಲಿ ಆಶ್ರಯ ಪಡೆದಿದ್ದೇವೆ. ಬೆತ್ತ ಹಿಡಿದ ಗುಂಪುಗಳು ಕನ್ನಡದವರನ್ನು ಹುಡುಕಿ ಒದೆಯುತ್ತಿದ್ದಾರೆ. ಹೀಗಾಗಿ ಆತಂಕದಲ್ಲಿ ಕಾಲ ಕಳೆಯುತ್ತಿದ್ದೇವೆ' ಎಂದು ಹುನಗುಂದ ತಾಲ್ಲೂಕಿನ ಚಿತ್ತವಾಡಗಿಯ ಯಾತ್ರಿ ಸಂಗಮೇಶ ಹೂಗಾರ ಅಳಲು ತೋಡಿಕೊಂಡರು.

ಕರ್ನೂಲ್ ಎಸ್‌ಪಿ ಸುಧೀರ್ ಕುಮಾರ ರೆಡ್ಡಿ ಕರ್ನಾಟಕ ಕೆಡಾರ್‌ನ ಐಪಿಎಸ್ ಅಧಿಕಾರಿ. ಈ ಮೊದಲು ಬೆಳಗಾವಿ ಎಸ್‌ಪಿ ಆಗಿದ್ದರು. ಈಗ ನಿಯೋಜನೆ ಮೇಲೆ ತವರು ರಾಜ್ಯ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.