
ತೇರದಾಳ: ಒಂದು ಗಂಟೆಗೂ ಅಧಿಕ ಕಾಲ ಸೆಣಸಿದರು. ಒಬ್ಬ ಮಲ್ಲ ಮತ್ತೊಬ್ಬನನ್ನು ಆಕಾಶ ತೋರಿಸುವ ಮೂಲಕ ಸೋಲುಣಿಸುವಲ್ಲಿ ಯಶಸ್ವಿಯಾಗದ್ದರಿಂದ ಉಸ್ತಾದ್‌ಗಳು ಜಟ್ಟಿಗಳ ಕಾಳಗವನ್ನು ಸಮಬಲವೆಂದು ತೀರ್ಮಾನಿಸಿದ್ದರಿಂದ ಕುಸ್ತಿ ಪ್ರೇಮಿಗಳು ನಿರಾಸೆಯಿಂದ ಮರಳಿದ ಘಟನೆ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಜರುಗಿತು.
ಗ್ರಾಮ ಆರಾಧ್ಯ ದೈವ ಶಿವಲಿಂಗೇಶ್ವರರ ಪುಣ್ಯಾರಾಧನೆ ಅಂಗವಾಗಿ ಶುಕ್ರವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಜರುಗಿದ ಕುಸ್ತಿ ಪಂದ್ಯಾವಳಿಯಲ್ಲಿ ಅತ್ಯಂತ ಕುತೂಹಲದಿಂದ ಒಂದನೇ ಕುಸ್ತಿಗಾಗಿ ಪುಣೆಯ ನೆಹರುಕುಮಾರ, ಬೆಳಗಾವಿಯ ಕಾಮೇಶರ ಸೆಣಸಾಟ ನೋಡಲು ಪ್ರೇಕ್ಷಕರು ತಾಸುಗಟ್ಟಲೆ ಕಾಯ್ದು ಕುಳಿತರು.
ಆರಂಭದಲ್ಲಿ ಮದಗಜಗಳಂತೆ ಗುದ್ದಾಡಿದ ಕುಸ್ತಿಪಟುಗಳು ಕೊನೆ ಕೊನೆಗೆ ನೀರಸ ಪ್ರದರ್ಶನ ನೀಡಲಾರಂಭಿಸಿದಾಗ ಜಾತ್ರಾ ಕಮಿಟಿಯ ಹಿರಿಯರು ಹಾಗೂ ಉಸ್ತಾದ್‌ಗಳು ಮಲ್ಲರನ್ನು ಸಮಬಲರೆಂದು ನಿರ್ಣಯಿಸಿ ಪಂದ್ಯಾವಳಿ ಮುಗಿಸಬೇಕಾಯಿತು.
ಆರಂಭದಲ್ಲಿ ಕುಸ್ತಿ ಮೈದಾನಕ್ಕೆ ಗ್ರಾಮದ ಮಹೇಶ ಹಿರೇಮಠ ಪೂಜೆ ಸಲ್ಲಿಸಿದರು. ಕಮಡೊಳ್ಳಿ ವಿರಕ್ತಮಠದ ಅಭಿನವ ರಾಚೋಟೇಶ್ವರ ದೇವರು, ತೇರದಾಳದ ಗಂಗಾಧರ ದೇವರು, ಕಾಶಿಲಿಂಗ ಮರಿದೇವರು ಸೇರಿದಂತೆ ಜಾತ್ರಾ ಕಮಿಟಿ ಹಿರಿಯರು ಉಪಸ್ಥಿತರಿದ್ದರು.
ಎರಡನೇ ಕುಸ್ತಿಗಾಗಿ ಬೆಳಗಾವಿಯ ಸಂಜು ಪೈಲ್ವಾನ್ ಜೊತೆ ಸಾಂಗಲಿಯ ಋಷಿಕೇಶ ಸೆಣಸಿದರು. ಮೂರನೇ ಕುಸ್ತಿಗಾಗಿ ಹಾರೂಗೇರಿಯ ಮುರಗೇಶ ಜೊತೆ ಅಥಣಿಯ ಮಲ್ಲಪ್ಪ ಸೆಣಸಿದರು. ಅಂದಾಜು 30 ಜೋಡಿಗಳು ಸೆಣಸಿ ಎದುರಾಳಿಯನ್ನು ಚಿತ್ ಮಾಡುವಲ್ಲಿ ಕೆಲವರು ಯಶಸ್ವಿಯಾದರೆ ಇನ್ನೂ ಕೆಲವರು ಸಮಬಲಕ್ಕೆ ಸಮಾಧಾನಗೊಂಡರು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣುರ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿದ್ಯಾಧರ ಸವದಿ ಸೇರಿದಂತೆ ಹಲವು ಮುಖಂಡರು ಮೈದಾನಕ್ಕೆ ತೆರಳಿ ಪೈಲ್ವಾನರಿಗೆ ಹುರುಪು, ಇನಾಮು ನೀಡಿದರು.
ಬಾಗಲಕೋಟ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಕಲ್ಲಪ್ಪ ಶಿರೋಳ, ತೇರದಾಳದ ಸಂಜು ಮುಕರಿ, ಬಸಪ್ಪ ಹುಬ್ಬಳ್ಳಿ, ಪ್ರಕಾಶ ಮಳ್ಳನ್ನವರ, ಅರುಣ ಸಂತಿ, ಮಾರುತಿ ಉಸ್ತದಾಗಳಾಗಿ ಕಾರ್ಯನಿರ್ವಹಿಸಿದರು. ಸುರೇಶ ಮರಡಿ ವೀಕ್ಷಕ ವಿವರಣೆ ನೀಡಿದರು. ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಕುಸ್ತಿ ಪ್ರೇಮಿಗಳು ಪಂದ್ಯಗಳನ್ನು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.