ADVERTISEMENT

ಚಪ್ಪಾಳೆ ತಟ್ಟಿ, ಗಂಟೆ, ಜಾಗಟೆ ಬಾರಿಸಿ, ಶಂಖ ಊದಿದರು!

ಕೊರೊನಾ ವಿರುದ್ಧದ ಸಮರಕ್ಕೆ ವ್ಯವಸ್ಥೆಯ ಬೆನ್ನು ತಟ್ಟಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:24 IST
Last Updated 22 ಮಾರ್ಚ್ 2020, 13:24 IST
ಕೂಡಲಸಂಗಮದ ಮಹೇಶ್ವರ ನಗರದ ಮನೆಯೊಂದರಲ್ಲಿ ಭಾನುವಾರ ಸಂಜೆ ಚಪ್ಪಾಳೆಯ ಅಭಿನಂದನೆ
ಕೂಡಲಸಂಗಮದ ಮಹೇಶ್ವರ ನಗರದ ಮನೆಯೊಂದರಲ್ಲಿ ಭಾನುವಾರ ಸಂಜೆ ಚಪ್ಪಾಳೆಯ ಅಭಿನಂದನೆ   

ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಹಿನ್ನೆಲೆಯಲ್ಲಿ ಭಾನುವಾರ ದಿನವಿಡೀ ಜನತಾ ಕರ್ಫ್ಯೂ ಆಚರಿಸಿದ ನಗರದ ಜನತೆ ಸಂಜೆ ಐದು ಗಂಟೆಗೆ ಮನೆಗಳ ಮೇಲೆ ನಿಂತು ಚಪ್ಪಾಳೆ ತಟ್ಟಿ, ಗಂಟೆ, ಜಾಗಟೆ ಬಾರಿಸಿ, ಶಂಖ ಊದಿ ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳ ಸಲ್ಲಿಸಿದರು.

ಗಡಿಯಾರದ ಮುಳ್ಳು ಸಂಜೆ 5 ಗಂಟೆಗೆ ತಾಗುತ್ತಿದ್ದಂತೆಯೇ ಅಭಿನಂದನೆಯ ಸದ್ದು ಮಾರ್ದನಿಸಿತು. ಮನೆಗಳ ಎದುರು, ಮಹಡಿ ಮೇಲೆ, ಕಾಂಪೌಂಡ್ ಒಳಗೆ, ರಸ್ತೆಗಳಲ್ಲಿ ಗುಂಪು ಗುಂಪಾಗಿ ಹಲವರು ನಿಂತು ಚಪ್ಪಾಳೆ ಬಾರಿಸಿದರು. ಕೆಲವರು ಕುಟುಂಬ ಸಮೇತರಾಗಿ ಈ ಕಾರ್ಯದಲ್ಲಿ ಪಾಲ್ಗೊಂಡರು. ಫೋಟೊ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸಂಭ್ರಮಿಸಿದರು. ವೃದ್ಧರು, ಮಹಿಳೆಯರು, ಮಕ್ಕಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡರು.

ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಚಿಕಿತ್ಸೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವೈದ್ಯರು, ಶುಶ್ರೂಷಕ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಮಾಧ್ಯಮದವರು ಹೀಗೆ ಸಮಾಜದ ನಾನಾ ವರ್ಗದವರು ಹಗಲಿರುಳು ದುಡಿಯುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಸಾಮೂಹಿಕವಾಗಿ ಚಪ್ಪಾಳೆ ತಟ್ಟಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸಲಹೆ ನೀಡಿದ್ದನ್ನು ಸ್ಮರಿಸಬಹುದು.

ADVERTISEMENT

ಶಾಸಕರಾದ ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಹಣಮಂತ ನಿರಾಣಿ ಕುಟುಂಬ ಸಮೇತರಾಗಿ ಚಪ್ಪಾಳೆ ತಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.