ADVERTISEMENT

ಕೂಡಲಸಂಗಮ: ಆರಂಭಗೊಳ್ಳದ ಬಸ್, ಸಂಚಾರಕ್ಕೆ ತೊಂದರೆ

ಪ್ರವಾಸಿ ತಾಣ ಕೂಡಲಸಂಗಮಕ್ಕೆ ತೆರಳಲು ಖಾಸಗಿ ವಾಹನಗಳಿಗೆ ಹೆಚ್ಚು ಹಣ

ಶ್ರೀಧರ ಗೌಡರ
Published 14 ಜುಲೈ 2021, 19:30 IST
Last Updated 14 ಜುಲೈ 2021, 19:30 IST
ಕೂಡಲಸಂಗಮಕ್ಕೆ ಆಗಮಿಸಿದ ಪ್ರವಾಸಿಗರು
ಕೂಡಲಸಂಗಮಕ್ಕೆ ಆಗಮಿಸಿದ ಪ್ರವಾಸಿಗರು   

ಕೂಡಲಸಂಗಮ: ಲಾಕ್‌ಡೌನ್‌ ತೆರವಿನ ಬಳಿಕ ಬಸ್ ಸಂಚಾರ ಆರಂಭಗೊಂಡು 23 ದಿನಗಳು ಕಳೆದರೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುನಗುಂದ, ಇಳಕಲ್ಲ ಘಟಕದಿಂದ ಕೂಡಲಸಂಗಮಕ್ಕೆ ಬಸ್ ಆರಂಭಿಸದೇ ಇರುವುದು ಪ್ರವಾಸಿಗರ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೋವಿಡ್‌ ಹರಡುವ ಭೀತಿಯಿಂದ ಸ್ಥಗಿತಗೊಂಡಿದ್ದ ಬಸ್ ಸೇವೆ ಜೂನ್‌ 21ರಂದು ಪುನರಾರಂಭವಾಗಿತ್ತು. ಅಂದಿನಿಂದ ಹುನಗುಂದ ಘಟಕದಿಂದ ಕೂಡಲಸಂಗಮ ಮಂಗಳೂರು ಬಸ್ ಹೊರತು ಪಡಿಸಿ ಯಾವುದೇ ಬಸ್ ಸೌಲಭ್ಯ ಆರಂಭಿಸಿಲ್ಲ. ಇದರಿಂದ ನಿತ್ಯ ಕ್ಷೇತ್ರ ದರ್ಶನಕ್ಕೆ ಬರುವ ಪ್ರವಾಸಿಗರು, ಮ್ಯಾಗೇರಿ, ಹಂಡರಗಲ್ಲ, ಕಟಗೂರ, ತುರಡಗಿ, ಬಿಸಲದಿನ್ನಿ, ವಳಕಲದಿನ್ನಿ, ಚವಡಕಮಲದಿನ್ನಿ, ಕೂಡಲಸಂಗಮ, ಕೆಂಗಲ್ಲ, ಕಜಗಲ್ಲ, ವರಗೋಡದಿನ್ನಿ, ಹೂವನೂರ ಗ್ರಾಮದ ಜನರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

ಬಾಗಲಕೋಟೆ ಘಟಕದಿಂದ ಬಾಗಲಕೋಟೆ ಕೂಡಲಸಂಗಮ ಮಾರ್ಗದಲ್ಲಿ ಎರಡು ಬಸ್ ಸಂಚರಿಸುತ್ತಿವೆ. ಹುನಗುಂದ, ಇಳಕಲ್ಲ ಘಟಕದಿಂದ ಹುನಗುಂದ- ಕೂಡಲಸಂಗಮ- ಮ್ಯಾಗೇರಿ ಬಸ್ ಸೇವೆ ಆರಂಭಿಸದೇ ಇರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರು, ಭಕ್ತರು ತೊಂದರೆಯಾಗಿದೆ

ADVERTISEMENT

ಕೂಡಲಸಂಗಮದಿಂದ ಹುನಗುಂದಕ್ಕೆ ನೇರ ಬಸ್ ಇರದ ಕಾರಣ ಪ್ರಯಾಣಿಕರು ಖಾಸಗಿ ವಾಹನದಲ್ಲಿ ಕೂಡಲಸಂಗಮ ಕ್ರಾಸ್‌ಗೆ ಬಂದು ನಂತರ ಹುನಗುಂದಕ್ಕೆ ಪ್ರಯಾಣಿಸುತ್ತಿದ್ದಾರೆ. ಕೂಡಲಸಂಗಮದಿಂದ ಹುನಗುಂದಕ್ಕೆ ₹28 ಬಸ್ ದರವಿದೆ. ಸದ್ಯ ಆಟೊ ಚಾಲಕರು ಕೂಡಲಸಂಗಮದಿಂದ ಸಂಗಮ ಕ್ರಾಸ್‌ಗೆ ಇರುವ 7 ಕಿ. ಮೀ ಪ್ರಯಾಣಕ್ಕೆ ₹20 ಹಾಗೂ ಕೂಡಲಸಂಗಮ ಕ್ರಾಸ್‌ನಿಂದ ಹುನಗುಂದಕ್ಕೆ ₹28 ಪಡೆಯುತ್ತಿದ್ದಾರೆ ಎನ್ನುವ ಆರೋಪಗಳಿವೆ. ಇದರಿಂದ ಪ್ರಯಾಣಿಕರು ಪ್ರವಾಸಿ ತಾಣಕ್ಕೆ ತೆರಳಲು ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ.

ಪ್ರವಾಸಿಗರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಕಳೆದ ವರ್ಷ ಹುನಗುಂದ ಘಟಕದಿಂದ ಕೂಡಲಸಂಗಮದಿಂದ ಬೆಂಗಳೂರು ಹಾಗೂ ಬಸವಕಲ್ಯಾಣ ಮಾರ್ಗದ ಸಂಚಾರ ಆರಂಭಿಸಿದ್ದರು. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಿತ್ತು. ಕೆಲವು ದಿನಗಳಿಂದ ಈ ಮಾರ್ಗದ ಬಸ್ ಸಂಚಾರ ಕೂಡಲಸಂಗಮದ ಬದಲು ಹುನಗುಂದದಿಂದ ಆರಂಭಗೊಂಡಿರುವುದು ಸಹ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟಕದ ಅಧ್ಯಕ್ಷ ಮಹಾಂತೇಶ ಕುರಿ ‘ದರ್ಶನಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಬಸ್ ಸೇವೆ ಇಲ್ಲದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಖಾಸಗಿಯವರು ಹೆಚ್ಚು ಹಣ ಪಡೆಯುತ್ತಿದ್ದಾರೆ‘ ಎಂದು ದೂರಿದರು.

ರಾಯಚೂರಿನ ರೂಪಾ ಪಾಟೀಲ, ಕೂಡಲಸಂಗಮದಿಂದ ಹುನಗುಂದಕ್ಕೆ ಸಂಚರಿಸಲು ಬಸ್ ಇಲ್ಲದ ಕಾರಣ ತೊಂದರೆಯಾಗಿದೆ. ಪ್ರವಾಸಿಗರ ಅನುಕೂಲಕ್ಕೆ ಸೌಲಭ್ಯ ಆರಂಭಿಸಬೇಕು ಎಂದರು.

ಆದಾಯ ಬರದ ಕಾರಣ ಸಂಚಾರ ಆರಂಭಿಸಿರಲಿಲ್ಲ. ಎರಡು ದಿನದಲ್ಲಿ ಕೂಡಲಸಂಗಮ ಮಾರ್ಗದ ಸಂಚಾರ ಆರಂಭಿಸುತ್ತೇವೆ.
ಬಿ. ಬಿ. ಚಿತ್ತವಾಡಗಿ, ಘಟಕ ವ್ಯವಸ್ಥಾಪಕ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.