ಮುಧೋಳ: ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯ ಸಾರಿ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಕಿಚ್ಚು ಹಚ್ಚಿದ ವಾಲ್ಮೀಕಿ–ನಾಯಕ ಸಮಾಜದ ಜಡಗಣ್ಣ, ಬಾಲಣ್ಣ ಸೇರಿದಂತೆ ಅನೇಕರ ಹೋರಾಟ ಅವಿಸ್ಮರಣೀಯ. ಅವರ ಸೇವೆ ಸ್ಮರಣೆಗೆ ನಗರದ ಹೃದಯ ಭಾಗದ ವಿಜಯಪುರ–ಬೆಳಗಾವಿ ರಾಜ್ಯ ಹೆದ್ದಾರಿ ಮೇಲೆ ಪ್ರತಿಷ್ಠಾಪನೆಗೊಂಡು ಹತ್ತು ತಿಂಗಳಾದರೂ ಇನ್ನೂ ಉದ್ಘಾಟನೆ ಕಾಣದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ನಗರದ ಜಡಗಣ್ಣ-ಬಾಲಣ್ಣ ವೃತ್ತದಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ 9 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಪ್ರತಿಷ್ಠಾಪನೆ ದಿನದಂದು ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ಹೊದಿಕೆ ಹಾಕಿದ ಅಧಿಕಾರಿಗಳು ಇದುವರೆಗೂ ಅದನ್ನು ತೆರೆಯುವ ಪ್ರಯತ್ನಕ್ಕೆ ಮುಂದಾಗಿಲ್ಲ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಸರ್ಕಾರದಲ್ಲಿ ಪ್ರಭಾವಿ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರ್.ಬಿ.ತಿಮ್ಮಾಪುರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಆನಾವರಣ ಮಾಡಿಸಬೇಕು ಎಂಬ ಸಂಕಲ್ಪದಿಂದ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರತಿನಿತ್ಯ ಪ್ರತಿಮೆಗಳಿರುವ ವೃತ್ತದ ಎದುರಿನಲ್ಲಿಯೇ ಓಡಾಡಿದರೂ ಪ್ರತಿಮೆ ಅನಾವರಣಕ್ಕೆ ಮಾತ್ರ ಮುಂದಾಗುತ್ತಿಲ್ಲ. ಹಲಗಲಿ ಬೇಡರ ದಂಗೆಯಿಂದ ಇತಿಹಾಸ ಪುಟದಲ್ಲಿ ತಾಲ್ಲೂಕಿನ ಹೆಸರು ಅಚ್ಚಳಿಯದೆ ಉಳಿಯುವಂತೆ ಮಾಡಿರುವ ಹೋರಾಟಗಾರರ ಪ್ರತಿಮೆ ಅನಾವರಣಕ್ಕೆ ಯಾಕಿಷ್ಟು ವಿಳಂಬ ಮಾಡುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ರಾಜಕೀಯ ಪ್ರತಿಷ್ಠೆ ಬದಿಗಿರಿಸಿ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿ ಶೀಘ್ರವೇ ಪ್ರತಿಮೆ ಅನಾವರಣಗೊಳಿಸಿ ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ಅನೇಕ ಮುಖಂಡರೊಂದಿಗೆ ಮೂರ್ತಿ ಅನಾವರಣಗೊಳಿಸಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳನ್ನು ಆಮಂತ್ರಿಸಿ ಬೇಗ ಉದ್ಘಾಟನೆ ಮಾಡಬೇಕುಭೀಮಸಿ ತಳವಾರ ಅಧ್ಯಕ್ಷ ತಾಲ್ಲೂಕು ವಾಲ್ಮೀಕಿ ಸಮಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.