ADVERTISEMENT

ಶಿಕ್ಷಕರ ದಿನಾಚರಣೆ | ಮೌಲ್ಯಾಧಾರಿತ ಶಿಕ್ಷಣ ಅವಶ್ಯ: ಸಚಿವ ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 3:58 IST
Last Updated 6 ಸೆಪ್ಟೆಂಬರ್ 2025, 3:58 IST
ಬಾಗಲಕೋಟೆಯಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸನ್ಮಾನಿಸಿದರು
ಬಾಗಲಕೋಟೆಯಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸನ್ಮಾನಿಸಿದರು   

ಬಾಗಲಕೋಟೆ: ಶಿಕ್ಷಣದ ಜೊತೆಗೆ ಸರಿ, ತಪ್ಪು, ನ್ಯಾಯ ನೀತಿ, ತಂದೆ–ತಾಯಿ, ಗುರು, ಹಿರಿಯರಿಗೆ ಗೌರವ ನೀಡುವಂತಹ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಕಲಾಭವನದಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 15-20 ವರ್ಷಗಳಲ್ಲಿ ಕಂಡರಿಯದ ರೀತಿಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವೆ ಇಂದಿನ ಆನ್‍ಲೈನ್ ಪಾಠದ ಗುರು ವೈಜ್ಞಾನಿಕ ಯುಗದಲ್ಲಿ ದೊಡ್ಡ ಗುರುಗಳಾಗಿ ಪರಿಣಮಿಸಿದ್ದಾರೆ. ಗುರು-ಶಿಷ್ಯರ ಸಂಬಂಧ ಕಳೆದು ಹೋಗುತ್ತಿರುವುದಕ್ಕೆ ಸಚಿವರು ಕಳವಳ ವ್ಯಕ್ತಪಡಿಸಿದರು.

ಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಮಾಹಿತಿಯುಳ್ಳ ಇಂದಿನ ಮಕ್ಕಳು ವಿಷಯ ತಿಳಿದುಕೊಂಡಿರುವುದರಿಂದ ಶಿಕ್ಷಕರೂ ಅಧ್ಯಯನ ಮಾಡಬೇಕು. ಪ್ರತಿನಿತ್ಯ ಕಲಿತು ಮಕ್ಕಳ ಜೊತೆ ಮಕ್ಕಳಾಗಿ ಬೋಧಿಸಬೇಕು. ಗುರು-ಶಿಷ್ಯರ ಸಂಬಂಧ ತಂದೆ-ತಾಯಿ ಸಂಬಂಧಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ಕೇವಲ ಹೆಚ್ಚು ಅಂಕ ಪಡೆಯುವುದರಿಂದ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ. ಮುಂದಿನ ಪೀಳಿಗೆ ಉತ್ತಮವಾಗಿರಬೇಕಾದರೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಅಕ್ಷರ ಜ್ಞಾನದ ಜೊತೆಗೆ ಮಾನವೀಯ ಮೌಲ್ಯ ನೀಡಿ ಬದುಕನ್ನು ರೂಪಿಸಿಕೊಟ್ಟ ಶಿಕ್ಷಕರನ್ನು ನೆನೆಪಿಸಿಕೊಳ್ಳುವ ಮಹತ್ವದ ದಿನವಾಗಿದೆ. ಮಕ್ಕಳಿಗೆ ಪಠ್ಯದ ಜೊತೆಗೆ ಕೌಶಲಾಭಿವೃದ್ಧಿಯಂತಹ ಶಿಕ್ಷಣ ನೀಡಿದಲ್ಲಿ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕ, ಸಾಮಾಜಿಕ ಬೆಳೆವಣಿಗೆ ಹೊಂದಲು ಸಾಧ್ಯವಾಗುತ್ತದೆ. ಗುರುಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾಗಿದ್ದು, ವಿದ್ಯಾರ್ಥಿ ಸಮಾಜದಲ್ಲಿ ಒಳ್ಳೆಯ, ಕೆಟ್ಟ ಕೆಲಸ ಮಾಡಿದರೂ ಶಿಕ್ಷಕರ ಮೇಲೆ ಬರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಜಾಗೃತಿಯಿಂದ ಕೆಲಸ ಮಾಡಬೇಕು ಎಂದರು. 

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಶಿಕ್ಷಕರನ್ನು ದೇವರ ಸಮಾನರಾಗಿ ಕಾಣಲಾಗುತ್ತಿದ್ದು, ಅದರಿಂದಲೇ ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ, ಗುರುಸಾಕ್ಷಾತ್ ಪರಬ್ರಹ್ಮ ಎಂಬ ನುಡಿ ಬಂದಿದೆ. ಮಕ್ಕಳ ಜೊತೆ ಪ್ರೀತಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾದ್ಯಾಪಕ ಜಿ.ಜಿ.ಹಿರೇಮಠ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ,  ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ. ಮನ್ನಿಕೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಇದ್ದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ವಿಭಾಗದಲ್ಲಿ ಬಿ.ಎ. ಚನ್ನಪ್ಪಗೌಡರ ಎಂ.ಜಿ. ಸಂಕಾನಟ್ಟಿ ಎಲ್.ಐ. ಲಮಾಣಿ ಎಸ್.ಎಸ್. ಬಡಿಗೇರ ಬಸವರಾಜ ಬಿರಾದಾರ ವಿ.ಎಸ್. ಕಲ್ಯಾಣಮಠ ಮಂಜುಶ್ರೀ ಮಣಿ ಆರ್.ಎಲ್. ಇನಾಮದಾರ ವಿ.ಎಸ್. ಹಲಕುರ್ಕಿ ಎನ್.ಬಿ. ಜಮಖಂಡಿ ರಮೇಶ ಕಂಕಣವಾಡಿ ಮಂಜುನಾಥ ಅಮೋಜಿ ಪ್ರೌಢವಿಭಾಗದಲ್ಲಿ ಸಿ.ಎಚ್.ನರಸಾಪೂರ ಐ.ಎಂ.ಉಜನಿ ಮಹೇಶ ಸಿಂದಗಿ ಬಿ.ಡಿ.ಚಿತ್ತರಗಿ ಎಂ.ಐ. ಸೊಡ್ಡಿ ಮಹಮ್ಮದ ರಫಿಕ್ ನದಾಫ್ ಜಿಲ್ಲಾ ಪಂಚಾಯಿತಿಯಿಂದ ಆಯ್ಕೆಯಾದ ಪ್ರಾಥಮಿಕ ವಿಭಾಗದಲ್ಲಿ ಭೀಮಮ್ಮ ದೇವದುರ್ಗ ಎನ್.ವೈ. ಮುಲ್ಲಾ ಪಿ.ಎಚ್. ಇನಾಮದಾರ ಎಂ.ವೈ. ಗುಡಿಮನಿ ಎನ್.ಎಂ. ಬೀಳಗಿ ಜೆ.ಎಚ್. ಡಾಲಾಯತ ಜೆ.ಎಸ್. ಗಳವೆ. ಪ್ರೌಢ ವಿಭಾಗದಿಂದ ಎಚ್.ಎ.ಸೌದಾಗರ ಲಕ್ಷ್ಮಣ ಚನ್ನಾಪೂರ ಶಿವಾನಂದ ಪದರಾ ವಿಶೇಷ ವಿಭಾಗದಲ್ಲಿ ವಿದ್ಯಾಧರ ಹಿರೇಮಠ ಎಂ.ಎಸ್.ಅರಳಿಮಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.