ಬಾಗಲಕೋಟೆ: ರಾಜಕೀಯ ನಾಯಕರ ನಿಷ್ಕಾಳಜಿಯಿಂದ ಮುಳುಗಡೆ ಹೊಂದಿದ ಪ್ರದೇಶದ ಮಾರುಕಟ್ಟೆ ನಿಗದಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ. ಅವರ ಮೇಲೆ ಒತ್ತಡ ಹಾಕುವ ಕೆಲಸವನ್ನು ವ್ಯಾಪಾರಸ್ಥರು, ಜನರು ಮಾಡಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆ ಚೇರಮನ್ ವಿಜಯ ಸಂಕೇಶ್ವರ ಹೇಳಿದರು.
ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಆ್ಯಂಡ್ ಎಂಟರಪ್ರೈನರ್ಸ್ ಅಸೋಸಿಯೇಷನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನಡೆಯುತ್ತಿದ್ದ ವ್ಯಾಪಾರದ ಉತ್ಸಾಹ ಈಗ ಕಾಣಿಸುತ್ತಿಲ್ಲ. ಬೆಳೆಯಲು ಇದ್ದ ಅವಕಾಶಗಳು ಕೈತಪ್ಪಿವೆ ಎಂದರು.
ದೇಶದಲ್ಲಿ ನಮ್ಮ ಸಂಸ್ಥೆಯ 1,250 ಬ್ರ್ಯಾಂಚ್‍ಗಳಿವೆ. ಇವುಗಳ ಪೈಕಿ ಬಾಗಲಕೋಟೆ, ಗದಗ, ದಾಂಡೇಲಿ ಬ್ರ್ಯಾಂಚ್‍ಗಳು ಮಾತ್ರ ರಿವರ್ಸ್‌ಗೇರಿನಲ್ಲಿವೆ. ಇದು ಬಾಗಲಕೋಟೆ ವ್ಯಾಪಾರದ ಕುಸಿತವನ್ನು ತೋರಿಸುತ್ತದೆ ಎಂದು ಹೇಳಿದರು.
200 ಎಕರೆಯಲ್ಲಿ ಒಂದೇ ಸೂರಿನಡಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಳಿದರೆ. ಅದರಲ್ಲಿ 100 ಎಕರೆ ರಸ್ತೆ ನಿರ್ಮಾಣಕ್ಕೆ ಹೋಗುತ್ತದೆ. 50 ಎಕರೆ ಪಾರ್ಕಿಂಗ್ ಹೋದರೆ ಉಳಿದ 50 ಎಕರೆಯಲ್ಲಿ ಮಾರುಕಟ್ಟೆ ಚಿಕ್ಕದಾಗುತ್ತದೆ. ಇನ್ನೂ ಹೆಚ್ಚಿನ ಜಾಗಕ್ಕೆ ವ್ಯಾಪಾರಸ್ಥರು ಒತ್ತಾಯ ಮಾಡಬೇಕು ಎಂದು ಸಲಹೆ ನೀಡಿದರು.
ಟ್ರುಆಲ್ಟ್ ಬಯೋಎನರ್ಜಿ ಸಂಸ್ಥಾಪಕ ವಿಜಯ ನಿರಾಣಿ ಮಾತನಾಡಿ, ವಿಜಯ ಸಂಕೇಶ್ವರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಸಾಧನೆಯೇ ನನಗೆ ‘ವಿಜಯ’ ಎಂದು ಹೆಸರಿಡಲು ಕಾರಣವಾಗಿದೆ. ನಿರಾಣಿ ಗ್ರೂಪ್ ಪ್ರತಿ ದಿನ 81 ಸಾವಿರ ಮೆ.ಟನ್ ಕಬ್ಬು ನುರಿಸುತ್ತದೆ. ಜಿಲ್ಲೆಗೆ ಬೇಕಾದ ಶೇ30ರಷ್ಟು ವಿದ್ಯುತ್ ಪೂರೈಕೆ ಮಾಡುತ್ತಿದೆ. ಎಥೆನಾಲ್ ಉತ್ಪಾದನೆಯಲ್ಲಿಯೂ ದಾಖಲೆ ಮಾಡಿದ್ದು, ಮುಂದಿನ ದಿನಗಳಲ್ಲಿ ಎಥೆನಾಲ್ ನಿಂದ ಇಥಿಲಿನ್ ಉತ್ಪಾದಿಸಿ ವಿಮಾನಗಳಿಗೆ ಇಂಧನ ಪೂರೈಕೆ ಮಾಡಲಾಗುವುದು ಎಂದರು.
ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಢರಪುರದ ಪ್ರಭಾಕರ ಬೋಧಲೆ ಮಹಾರಾಜ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ಎಂ.ಪಿ. ನಾಡಗೌಡ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶಟ್ಟಿ, ಅಸೋಸಿಯೇಶನ್ಸ್ ಅಧ್ಯಕ್ಷ ರವಿ ಕುಮಟಗಿ, ವಿರೂಪಾಕ್ಷ ಅಮೃತಕರ, ಪವನ ಸಿಮಿಕೇರಿ, ಶ್ರೀನಿವಾಸ ಬಳ್ಳಾರಿ ಇದ್ದರು.
ವ್ಯಾಪಾರಸ್ಥರ ಜೀವನ ಚಿಂತೆಯೊಳಗೆ ಮುಳಗಿದೆ. 25 ವರ್ಷಗಳಲ್ಲಿ ಸಾಕಷ್ಟು ಪ್ರಯತ್ನಗಳಾದರೂ ಒಂದೇ ಸೂರಿನಡಿ ಮಾರುಕಟ್ಟೆ ಮಾಡಲು ಸಾಧ್ಯವಾಗಿಲ್ಲ. ಅದು ಆದಾಗಲೇ ವ್ಯಾಪಾರಸ್ಥರ ಬದುಕು ನೆಮ್ಮದಿ ಕಾಣಲಿದೆ.ರವಿ ಕುಮಟಗಿ ಅಧ್ಯಕ್ಷ ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಅಸೋಸಿಯೇಷನ್
1972 ರಿಂದ ವ್ಯಾಪಾರಸ್ಥರ ಆತಂಕ ನಿವಾರಣೆ ಆಗಿಲ್ಲ. ಯಾವ ಸರ್ಕಾರಗಳೂ ಗಟ್ಟಿ ನಿರ್ಧಾರ ಕೈಗೊಳ್ಳಲಿಲ್ಲ. ಬೆಳಿಗ್ಗೆ 11 ಗಂಟೆಯಾದಾರೂ ಬಿಡಿಗಾಸು ವ್ಯಾಪಾರ ಆಗಿರುವುದಿಲ್ಲ. ಸಮಗ್ರ ಮಾರುಕಟ್ಟೆ ಸ್ಥಾಪನೆ ದಾರಿ ದೂರ ಇದೆ. ಪ್ರಯತ್ನ ಬಿಡಬಾರದುಪ್ರಕಾಶ ತಪಶೆಟ್ಟಿ ಅಧ್ಯಕ್ಷ ಬಸವೇಶ್ವರ ಬ್ಯಾಂಕ್
ಸಂಕುಚಿತ ಭಾವನೆ ಬೇಡ
ಬಾಗಲಕೋಟೆ ನಗರದ ಅಭಿವೃದ್ಧಿ ವಿಷಯದಲ್ಲಿ ಸಂಕುಚಿತ ಭಾವನೆಯಿಂದ ಹೊರಬರಬೇಕು. ಎಲ್ಲ ಮನಸುಗಳು ಒಂದಾಗಬೇಕು ಎಂದು ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಹೇಳಿದರು. ಮುಳಗಡೆಯಿಂದಾಗಿ ಬಾಗಲಕೋಟೆ ಜನ ನಿರಾಶ್ರಿತರಾಗಿದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ವ್ಯಾಪಾರ ಕುಸಿದು ಹೋಗಿದೆ. ಇದಕ್ಕೆ ಬಲ ತುಂಬಲು ಸರ್ಕಾರ ಮಟ್ಟದಲ್ಲಿ ಸರ್ವರೂ ಕೂಡಿಕೊಂಡು ಪ್ರಯತ್ನ ಮಾಡಬೇಕು ಎಂದರು. ಮಾಜಿ ಸಚಿವ ಎಸ್.ಆರ್.ಪಾಟೀಲ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ದೂರವಿಟ್ಟಿದ್ದು ಸಮಂಜಸವಲ್ಲ. ನಗರದ ಅಭಿವೃದ್ಧಿಗೆ ಅವರ ಕೊಡುಗೆಯೂ ಇದೆ. ಶಾಸಕ ಎಚ್.ವೈ. ಮೇಟಿ ಅವರನ್ನೂ ಸೇರಿಸಿಕೊಂಡು ಸರ್ಕಾರ ಮಟ್ಟದಲ್ಲಿ ಅಭಿವೃದ್ಧಿಗೆ ಒತ್ತಾಯಿಸೋಣ ಬಾಗಲಕೋಟೆಯಲ್ಲಿ ಉದ್ಯಮ ಸ್ಥಾಪಿಸಲು ವಿಆರ್‍ಎಲ್ ಹಾಗೂ ಎಂಆರ್‌ಎನ್ ಗ್ರೂಪ್ ಮುಂದಾಗಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.