ADVERTISEMENT

ಬಾಗಲಕೋಟೆ | ಸಂಸ್ಕಾರವಂತ ಸಾಹಿತಿಗಳ ಸಾಂಗತ್ಯ ಬೆಳೆಸಿ: ವೀರಣ್ಣ ಚರಂತಿಮಠ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:22 IST
Last Updated 14 ಸೆಪ್ಟೆಂಬರ್ 2025, 4:22 IST
ಬಾಗಲಕೋಟೆಯಲ್ಲಿ ನಡೆದ ಸಾಹಿತ್ಯಿಕ ಸರಣಿ ಕಾರ್ಯಕ್ರಮವನ್ನು ವೀರಣ್ಣ ಚರಂತಿಮಠ ಉದ್ಘಾಟಿಸಿದರು 
ಬಾಗಲಕೋಟೆಯಲ್ಲಿ ನಡೆದ ಸಾಹಿತ್ಯಿಕ ಸರಣಿ ಕಾರ್ಯಕ್ರಮವನ್ನು ವೀರಣ್ಣ ಚರಂತಿಮಠ ಉದ್ಘಾಟಿಸಿದರು    

ಬಾಗಲಕೋಟೆ: ‘ಯುವ ಸಾಹಿತಿಗಳು ವಿವಾದಾತ್ಮಕ ಸಾಹಿತಿಗಳ ಸಹವಾಸದಿಂದ ದೂರವಿದ್ದು, ಸಂಸ್ಕಾರವಂತ ಸಾಹಿತಿಗಳ ಸಹವಾಸ ಬೆಳೆಸಿಕೊಳ್ಳಬೇಕು’ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶನಿವಾರ ನಡೆದ ‘ತನ್ನ ತಾನರಿದು ತಾನಾದಡೆ ವಚಕಾರ್ತಿಯರ ಲೋಕದೃಷ್ಟಿ ಸಾಹಿತ್ಯ ಸಹವಾಸ’ ಸಾಹಿತ್ಯಿಕ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಕೆಲ ಸಾಹಿತಿಗಳು ಪ್ರತಿ ವಿಷಯದಲ್ಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಮಾಜ ವ್ಯವಸ್ಥೆಯನ್ನು ಕಲುಷಿತಗೊಳಿಸುವ ಮೂಲಕ ತಮ್ಮ ಜನಪ್ರಿಯತೆಯ ವಿಕೃತಿ ಮೆರೆಯುತ್ತಿದ್ದಾರೆ. ಇದು ಭವಿಷ್ಯದ ಯುವ ಸಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಹೀಗಾಗಿ ಯುವ ಸಾಹಿತಿಗಳು ಇಂತಹ ಸಾಹಿತಿಗಳ ಸಹವಾಸಕ್ಕೆ ಹೋಗಬಾರದು’ ಎಂದರು.

‘ವಚನಸಾಹಿತ್ಯ, ದಾಸಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಕನ್ನಡ ಭಾಷೆ ಶ್ರೀಮಂತಗೊಳಿಸಿ ಪ್ರಪಂಚಕ್ಕೆ ಪರಿಚಯಿಸುವ ಕಾರ್ಯ ಮಾಡಿವೆ. ಪ್ರಪಂಚದ ಸಾಹಿತ್ಯದಲ್ಲಿ ವಚನ ಸಾಹಿತ್ಯಕ್ಕೆ ಅಗ್ರಸ್ಥಾನವಿದ್ದು ಅಂತಹ ಕನ್ನಡ ವಚನಕಾರ್ತಿಯರ ಲೋಕದೃಷ್ಟಿ ಹಿನ್ನೆಲೆ ಇಟ್ಟುಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ  ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ  ಮಾತನಾಡಿ, ‘ವಚನಕಾರ್ತಿಯರು ನುಡಿದಂತೆ ನಡೆದು, ಕಾಯಕವೇ ಕೈಲಾಸ ಮತ್ತು ಸಮಾನತೆಯ ಚಿಂತನೆಗಳನ್ನು ಶಿವಶರಣರ ಸಮಾನವಾಗಿ ತರ್ಕಿಸುವಷ್ಟು ಎತ್ತರಕ್ಕೆ ಬೆಳೆದಿದ್ದರು’ ಎಂದರು.

ಬೆಂಗಳೂರಿನ ಅಜೀಂ ಪ್ರೇಮ್‌ಜಿ ಫೌಂಡೇಷನ್ ಮುಖ್ಯ ಸಂವಹನಾಧಿಕಾರಿ ಸುಧೀಶ ವೆಂಕಟೇಶ ಪ್ರಾಸ್ತಾವಿಕ ಮಾತನಾಡಿ, ಫೌಂಡೇಷನ್‌ದಿಂದ ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಬಸವೇಶ್ವರ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಮಹೇಶಕುಮಾರ ಸಿ.ಎಸ್., ಸಹ ನಿರ್ದೇಶಕ ಎಸ್.ವಿ.ಮಂಜುನಾಥ ಇದ್ದರು.

ಚಿತ್ರ ಕಲಾವಿದ ಚ.ಭೀ.ಸೋಮಶೆಟ್ಟಿ ಅವರ ರಚಿಸಿರುವ ರೇಖಾ ಚಿತ್ರ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.