
ಹುನಗುಂದ: ‘ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯಾವುದೇ ಆಮಿಷಕ್ಕೊಳಗಾಗದೇ ಎಲ್ಲರೂ ತಪ್ಪದೇ ಮತದಾನ ಮಾಡಬೇಕು’ ಎಂದು ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ ಹೇಳಿದರು.
ಭಾನುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರ ಸಂಖ್ಯೆ ಅಧಿಕವಾಗಿರುವ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಯುವಕರು ತಪ್ಪದೇ ಮತದಾನ ಮಾಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾತನಾಡಿ, ‘ಮತದಾರರ ಪಟ್ಟಿಗೆ ಸೇರಿಸಲು ಅಗತ್ಯವಿರುವ ಪ್ರಕ್ರಿಯೆಗಳನ್ನು ವಿವರಿಸಿದರು. ಮತದಾರರ ದಿನಾಚರಣೆಯ ಹಿನ್ನೆಲೆ, ಪ್ರಸ್ತುತತೆ ಕುರಿತು ಕಮತಗಿಯ ಗ್ರಾಮೀಣ ಕಲೆ, ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಿ.ಆರ್. ಕುಬಸದ ಉಪನ್ಯಾಸ ನೀಡಿದರು. ಪ್ರಾಚಾರ್ಯ ಸಿಕಂದರ್ ಧನ್ನೂರ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ವಿ.ಎಸ್.ಬಂಡಿ, ಕಾರ್ಯದರ್ಶಿ ಆರ್.ಎಸ್.ಕೋಕಾಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಸ್. ಜಿ.ಎಮ್ಮಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಇದ್ದರು. ಬಿ.ವೈ. ಅಲೂರ ಸ್ವಾಗತಿಸಿದರು. ರುದ್ರೇಶ ಅಳ್ಳೊಳ್ಳಿ ನಿರೂಪಿಸಿದರು. ಗುಲಾಮ ಸಮಾನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.