
ಬೀಳಗಿ: ಪಟ್ಟಣದಲ್ಲಿ ತ್ಯಾಜ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪೌರಕಾರ್ಮಿಕರ ಕೊರತೆ ಎದುರಾಗಿದೆ.
ಪಟ್ಟಣದಲ್ಲಿ 23 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿದಿನ 6 ರಿಂದ 7 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅದನ್ನು ವಿಲೇವಾರಿ ಮಾಡುವುದು ಪಟ್ಟಣ ಪಂಚಾಯತಿಗೆ ಸವಾಲಾಗಿ ಪರಿಣಮಿಸಿದೆ.
ಪ್ರತಿ 700 ನಾಗರಿಕರಿಗೆ ಒಬ್ಬ ಪೌರಕಾರ್ಮಿಕ ಇರಬೇಕು ಎಂಬ ನಿಯಮವಿದೆ. ಆದರೆ, ಪಟ್ಟಣ ಪಂಚಾಯತಿಯಲ್ಲಿ 21 ಪೌರಕಾರ್ಮಿಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರ ಕೊರತೆಯಿಂದಾಗಿ 18 ವಾರ್ಡ್‌ಗಳಲ್ಲಿ ಪ್ರತಿ ದಿನ ಸ್ವಚ್ಛತೆ ಕೈಗೊಳ್ಳಲು ಆಗುತ್ತಿಲ್ಲ. ಪಟ್ಟಣದ ಸುತ್ತ ಎರಡು ಕಿ.ಮೀ ವ್ಯಾಪ್ತಿಯಲ್ಲಿ ನೂತನ ಬಡಾವಣೆಗಳು ನಿರ್ಮಾಣಗೊಂಡಿದ್ದು, ಅಲ್ಲಿಯೂ ಸ್ವಚ್ಛತಾ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ.
ಪ್ರತಿ ದಿನ ಬೆಳಿಗ್ಗೆ 5.30ರಿಂದ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಆರಂಭಿಸುತ್ತಾರೆ. ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಸಿದ್ದೇಶ್ವರ ದೇವಸ್ಥಾನದ ರಸ್ತೆ, ಶಿವಾಜಿ ವೃತ್ತ ,ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಸೇರಿ 18ವಾರ್ಡಗಳಲ್ಲಿ ವಿವಿಧೆಡೆ ಪೌರಕಾರ್ಮಿಕರು ಕಸ ಗುಡಿಸುತ್ತಾರೆ. ಕೆಲವು ಜನ ಪೌರಕಾರ್ಮಿಕರು ಟ್ರ್ಯಾಕ್ಟರ್‌ಗೆ ಕಸ ತುಂಬಿಸುತ್ತಾರೆ. ಉಳಿದವರು ಚರಂಡಿ ಸ್ವಚ್ಛಗೊಳಿಸುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.
ಪೌರಕಾರ್ಮಿಕರು ಪ್ರತಿದಿನ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಈ ಮಧ್ಯೆ ಹಬ್ಬದ ಸಂದರ್ಭಗಳಲ್ಲಿ ಪಟ್ಟಣದಲ್ಲಿ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಪೌರಕಾರ್ಮಿಕರ ಕೊರತೆಯಿಂದಾಗಿ ಇರುವ ಕಾರ್ಮಿಕರ ಮೇಲೆ ಒತ್ತಡ ಉಂಟಾಗುತ್ತಿದೆ ಎಂದು ಪೌರಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.
‘ಈಗಿನ ಜನಸಂಖ್ಯೆಗೆ ಅನುಗುಣವಾಗಿ 32 ಪೌರಕಾರ್ಮಿಕರ ಅಗತ್ಯವಿದೆ. ಆದರೆ, ಪ್ರಸ್ತುತ 21ಜನ ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸಂಖ್ಯೆಗೆ ತಕ್ಕಂತೆ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕಿತ್ತು. ಆದರೆ, ಇರುವ ಕಾರ್ಮಿಕರಿಂದ ಸ್ವಚ್ಛತೆ ಮಾಡಿಸುತ್ತಿದ್ದೇವೆ’ ಎಂದು ಪಟ್ಟಣ ಪಂಚಾಯತಿ ಕಿರಿಯ ಆರೋಗ್ಯ ನಿರೀಕ್ಷಕ ಆರ್.ಎನ್.ತಳಕೇರಿ ಪ್ರಜಾವಾಣಿಗೆ ತಿಳಿಸಿದರು.
‘ಪ್ರತಿ ದಿನ ಎಲ್ಲ ವಾರ್ಡ್‍ಗಳಲ್ಲಿ ಕಸ ಸಂಗ್ರಹ ಮಾಡಲು ವಾಹನಗಳು ಹೋಗುತ್ತವೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲದೆ ವಿಂಗಡಣೆ ಮಾಡಿ ವಾಹನಗಳಲ್ಲಿ ಹಾಕಬೇಕು. ಆ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು’ ಎಂದು ಬೀಳಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ ಮನವಿ ಮಾಡಿದರು.
ಪ್ರತಿದಿನ 6 ಟನ್‌ಗೂ ಹೆಚ್ಚು ತ್ಯಾಜ್ಯ ಉತ್ಪತ್ತಿ ಸ್ವಚ್ಛತೆ ಸವಾಲು ಇದೆ. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಪೌರಕಾರ್ಮಿಕರ ಅಗತ್ಯ ಇದೆ. ಈ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಲಭ್ಯ ಇರುವ ಕಾರ್ಮಿಕರಿಂದ ಸ್ವಚ್ಛತೆ ಮಾಡಿಸಲಾಗುತ್ತಿದೆದೇವಿಂದ್ರ ಧನಪಾಲ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ ಬೀಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.