
ಬಾಗಲಕೋಟೆ: ವೃತ್ತಿಪರ ನೇಕಾರರಿಗೆ ಸೌಲಭ್ಯಗಳನ್ನು ಒದಗಿಸಲು ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಇಲಾಖೆಗೆ ರಾಜ್ಯ ಬಜೆಟ್‌ನಲ್ಲಿ ₹1,500 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದಿಂದ ಮನವಿ ಸಲ್ಲಿಸಲಾಯಿತು.
ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ನೇಕಾರರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಗುರುತಿನ ಚೀಟಿ ವಿತರಣೆ ಮಾಡಬೇಕು. ಸಹಕಾರಿ ಸಂಘಗಳು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಒಂದು ಬಾರಿ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅಧ್ಯಕ್ಷ ಶಿವಲಿಂಗ ಟಿರಕಿ ನೇತೃತ್ವದಲ್ಲಿ ಒತ್ತಾಯಿಸಿದರು.
55 ವರ್ಷ ಮೇಲ್ಪಟ್ಟ ನೇಕಾರರಿಗೆ ಪ್ರತಿ ತಿಂಗಳು ₹5 ಸಾವಿರ ಮಾಸಾಶನ ಮಂಜೂರು ಮಾಡಬೇಕು. ಸಾಲಲದ ಹೊರೆಯಿಂದ 55 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬದವರಿಗೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನೇಕಾರ ಸಮ್ಮಾನ ಯೋಜನೆಯ ಮೊತ್ತವನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಬೇಕು. ಎಲ್ಲ ವೃತ್ತಿಪರ ನೇಕಾರರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು. ಶೂನ್ಯ ಬಡ್ಡಿ ದರದ ಸಾಲದ ಪ್ರಮಾಣವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೆಎಚ್‌ಡಿಸಿ ನೇಕಾರರಿಗೆ ಹಕ್ಕುಪತ್ರ ನೀಡುವಲ್ಲಿರುವ ತೊಂದರೆಗಳನ್ನು ಪರಿಹರಿಸಬೇಕು. ವಸತಿ ಇಲ್ಲದವರಿಗೆ ನಿವೇಶನ ನೀಡಬೇಕು. ಎರಡು ವರ್ಷಗಳ ಹಿಂದೆ ಜಾರಿಯಾಗಬೇಕಿದ್ದ ಜವಳಿ ನೀತಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕೈಮಗ್ಗ ನೇಕಾರರ ಉತ್ಪಾದನೆಗಳ ನೇರ ಮಾರಾಟಕ್ಕೆ ಮಳಿಗೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರದ ಇಲಾಖೆಗಳಲ್ಲಿ ನೇಕಾರರಿಂದ ಬಟ್ಟೆ ಖರೀದಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.