ADVERTISEMENT

ದೊರೆಸ್ವಾಮಿ ಪ್ರಶ್ನಿಸಲು ಆರ್‌ಎಸ್‌ಎಸ್‌ಗೆ ಯಾವ ಅರ್ಹತೆ ಇದೆ: ಹಿರೇಮಠ ಪ್ರಶ್ನೆ

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 9:20 IST
Last Updated 29 ಫೆಬ್ರುವರಿ 2020, 9:20 IST
ಹಿರೇಮಠ
ಹಿರೇಮಠ   

ಬಾಗಲಕೋಟೆ: ’ಬ್ರಿಟಿಷರಿಗೆ ವೀರ ಸಾವರ್ಕರ್ ಕ್ಷಮಾಪಣಾ ಪತ್ರ ಬರೆದುಕೊಟ್ಟದ್ದು ಬಿಟ್ಟರೆ ಈ ದರಿದ್ರ ಆರ್‌ಎಸ್‌ಎಸ್, ಸಂಘಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಯಾವ ಹಿನ್ನೆಲೆಯೂ ಇಲ್ಲ. ಹೀಗಿದ್ದ ಮೇಲೆ ದೊರೆಸ್ವಾಮಿ ಅವರನ್ನು ಕೇಳಲು ಇವರ್ಯಾರು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸನಗೌಡ ಯತ್ನಾಳ ಅಂತಹವರ ಉದ್ಧಟತನದ ಹೇಳಿಕೆ ಒಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ಯತ್ನಾಳ ಅಷ್ಟೇ ಅಲ್ಲ ಇಂತಹ ನಾಲಿಗೆ ಹರಿಯಬಿಡುವವರು ತಕ್ಷಣ ತಮ್ಮ ಬಾಯಿ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

ಈ ರೀತಿ ಅತಿ ಬೇಜವಾಬ್ದಾರಿಯಾಗಿನಾಲಿಗೆ ಬಳಸಿ ನಾಚಿಕೆಗೇಡಿನ ಮಾತನಾಡುವವರ ಬಗ್ಗೆ ಕಿಂಚಿತ್ತು ಅನುಕಂಪಪಡುವುದು ಬೇಡ ಎಂದು ಮಾಧ್ಯಮದವರಿಗೆ ಮನವಿ ಮಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅಂತಹವರು ಬಹುಬೇಗ ಜನರ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.

ADVERTISEMENT

ಅಮಿತ್ ಶಾ ರಾಜೀನಾಮೆ ಕೊಡಲಿ..

ದೇಶ ವಿಭಜನೆ ಹಾಗೂ 80ರ ದಶಕದ ಸಿಖ್ ಗಲಭೆಯ ನಂತರದೆಹಲಿಯಲ್ಲಿ ಅತಿ ದೊಡ್ಡ ಗಲಭೆ ನಡೆದಿದೆ. ಈ ವೇಳೆ‍ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ನಾಚಿಕೆ, ಮಾನ–ಮರ್ಯಾದೆ ಇದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಕ್ಷಣ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕಿತ್ತು ಹಾಕಲಿ ಎಂದು ಒತ್ತಾಯಿಸಿದರು.

’ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನು ರಾತ್ರೋರಾತ್ರಿ ವರ್ಗಾವಣೆಗೊಳಿಸಿರುವುದು ನೋಡಿದರೆ 70ರ ದಶಕದ ಮಧ್ಯಭಾಗದ ತುರ್ತು ಪರಿಸ್ಥಿತಿ ಮತ್ತೆ ಜಾರಿಯಾಗಿರುವುದು ವೇದ್ಯವಾಗುತ್ತಿದೆ. ಇದರ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟ ಆಗುವ ಎಲ್ಲ ಲಕ್ಷಣವೂ ಕಾಣುತ್ತಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.