ADVERTISEMENT

Womens Day | ಮೊಸರಿನಿಂದ ಆರ್ಥಿಕ ಸಬಲತೆಯತ್ತ ರೈತ ಮಹಿಳೆಯರು

ವಿಶ್ವಜ ಕಾಡದೇವರ
Published 8 ಮಾರ್ಚ್ 2024, 5:44 IST
Last Updated 8 ಮಾರ್ಚ್ 2024, 5:44 IST
ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ದಿನನಿತ್ಯ ಮೊಸರು ಮಾರಾಟ ಮಾಡುವ ರೈತ ಮಹಿಳೆ
ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ದಿನನಿತ್ಯ ಮೊಸರು ಮಾರಾಟ ಮಾಡುವ ರೈತ ಮಹಿಳೆ   

ರಬಕವಿ ಬನಹಟ್ಟಿ: ಮಾರುಕಟ್ಟೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಕಂಪನಿಗಳ ಮೊಸರು ದೊರೆಯುತ್ತದೆ. ಆದರೆ ಬನಹಟ್ಟಿ ರಬಕವಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ರೈತ ಮಹಿಳೆಯರು ನಿತ್ಯ ಮೊಸರು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವುದರ ಜೊತೆಗೆ ಮೊಸರು ಮಾರಾಟದಿಂದ ಆರ್ಥಿಕ ಸಬಲತೆ ಕೂಡ ಪಡೆಯುತ್ತಿದ್ದಾರೆ.

ಸಂಜೆಯಾಗುತ್ತಿದ್ದಂತೆ ತಮ್ಮ ಹೊಲ ಮತ್ತು ತೋಟದಲ್ಲಿರುವ ಎಮ್ಮೆಗಳ ಹಾಲು ಕರೆದು, ಕಾಯಿಸಿ ರಾತ್ರಿ ಎರಡು ಮೂರು ಡಬ್ಬಿಗಳಲ್ಲಿ ಹೆಪ್ಪು ಹಾಕುತ್ತಾರೆ. ಬೆಳಿಗ್ಗೆ ಏಳು ಗಂಟೆಯಷ್ಟರಲ್ಲಿ ಸ್ಥಳೀಯ ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಾರೆ.

ಐದಾರು ಲೀಟರ್‌ಗಳಷ್ಟು ಮೊಸರನ್ನು ಮಾರುಕಟ್ಟೆಗೆ ತರುತ್ತಾರೆ. ಇವರು ಬರುವುದಷ್ಟೇ ತಡ ಮೊಸರಿಗಾಗಿ ಜನರು ಮುಗಿ ಬೀಳುತ್ತಾರೆ. ಕೆಲವರು ಮನೆಯಿಂದ ಡಬ್ಬಿಗಳನ್ನು ತಂದು ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಬೆಳಗಿನ ವಾಯು ವಿಹಾರ ಮುಗಿಸಿಕೊಂಡು ಮೊಸರು ತೆಗೆದುಕೊಂಡು ಹೋಗುತ್ತಾರೆ. ಇವರು ಕೂಡ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿರುತ್ತಾರೆ.

ADVERTISEMENT

ಸ್ಥಳೀಯ ಮಂಗಳವಾರ ಪೇಟೆಯಲ್ಲಿ ನಿತ್ಯ ಹತ್ತಾರು ಮಹಿಳೆಯರು ಮೊಸರು ಮಾರಾಟದಲ್ಲಿ ನಿರತರಾಗಿರುತ್ತಾರೆ. ಪ್ರತಿ ದಿನ ಒಬ್ಬ ಮಹಿಳೆ ಐದಾರು ನೂರು ರೂಪಾಯಿಗಳ ಮೊಸರನ್ನು ಮಾರಾಟ ಮಾಡುತ್ತಾರೆ.

ಊಟದ ಕಾರ್ಯಕ್ರಮಗಳಿಗೆ ಬೇಕಾದವರು ಒಂದು ದಿನ ಮೊದಲೇ ಬಂದು ಮೊಸರಿಗೆ ಆರ್ಡರ್ ಮಾಡಿ ಹೋಗಿರುತ್ತಾರೆ. ಮೊಸರಿನ ಜೊತೆಗೆ ಬೆಣ‍್ಣೆಯನ್ನೂ ಮಾರುವ ಇವರು ಬೆಣ್ಣೆಯಿಂದಲೂ ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಮಹಿಳೆಯರು ತಮ್ಮ ತೋಟದಲ್ಲಿ ಬೆಳೆದ ತರಕಾರಿಯೊಂದಿಗೆ ಮೊಸರಿನ ವ್ಯವಹಾರ ಮಾಡುತ್ತಾರೆ. ಇಲ್ಲಿನ ಮಾರುಕಟ್ಟೆಯಲ್ಲಿ ನಿತ್ಯವೂ ಅಂದಾಜು ₹ 10000 ಮೌಲ್ಯದ ಮೊಸರಿನ ವ್ಯಾಪಾರ ನಡೆಯುತ್ತದೆ. ಇನ್ನೂ ಕೆಲವು ಮಹಿಳೆಯರು ಮಾರುಕಟ್ಟೆಗೆ ಬರದೇ ಬೆಳಿಗ್ಗೆ ಮೊಸರಿನ ಡಬ್ಬಿಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳಿ ಮಾರುತ್ತಾರೆ.

‘ಮೊಸರಿನ ವ್ಯಾಪಾರ ಮಹಿಳೆಯರಿಗೆ ಅನುಕೂಲವಾಗಿದೆ. ಇದರಿಂದ ಬಂದ ಹಣವು ಮನೆಯ ಖರ್ಚಿಗೆ ಮತ್ತು ಕೆಲವು ಸಂದರ್ಭದಲ್ಲಿ ಮನೆಯ ಗಂಡು ಮಕ್ಕಳಿಗೆ ಹಣದ ಅಡಚಣೆಯಾದಾಗ ಅನುಕೂಲವಾಗುತ್ತದೆ’ ಎನ್ನುತ್ತಾರೆ ನಾವಗಲಿ ಗ್ರಾಮದ ರೈತ ಮಹಿಳೆಯರಾದ ನೀಲವ್ವ ಮದನಮಟ್ಟಿ ಮತ್ತು ಜಗದಾಳ ಗ್ರಾಮದ ಗೌರವ್ವ ಕಲಮಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.