ADVERTISEMENT

ಅಂಗವೈಕಲ್ಯ ಮೀರಿ ಸ್ವಾವಲಂಬನೆಯ ಸಾಧನೆಯತ್ತ...

ವಿಶ್ವ ಅಂಗವಿಕಲರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 10:16 IST
Last Updated 3 ಡಿಸೆಂಬರ್ 2013, 10:16 IST
ಬಟ್ಟೆ ಹೊಲಿಯುವುದಕ್ಕೆ ಅಣಿಯಾಗುತ್ತಿರುವ ಹುಲಿಗೆಮ್ಮ.  ಪ್ರಜಾವಾಣಿ ಚಿತ್ರಗಳು: ಟಿ.ರಾಜನ್‌
ಬಟ್ಟೆ ಹೊಲಿಯುವುದಕ್ಕೆ ಅಣಿಯಾಗುತ್ತಿರುವ ಹುಲಿಗೆಮ್ಮ. ಪ್ರಜಾವಾಣಿ ಚಿತ್ರಗಳು: ಟಿ.ರಾಜನ್‌   

ಬಳ್ಳಾರಿ: ಚಿಕ್ಕಂದಿನಿಂದಲೇ ಎದುರಾದ ಅಂಗವೈಕಲ್ಯ­ದಿಂದಾಗಿ ಇವರು ಎಲ್ಲರಂತಿಲ್ಲ. ಆದರೂ, ನ್ಯೂನತೆ­ಯನ್ನು ಜಯಿಸಿ, ಎಲ್ಲರಂತೆಯೇ ಜೀವನ ನಡೆಸುವುದಕ್ಕೆ ಇವರು ಪಡುತ್ತಿರುವ ಶ್ರಮ ಅನನ್ಯ.

ಅಂಗವೈಕಲ್ಯಕ್ಕೆ ಒಳಗಾದರೂ, ಅದೊಂದು ಶಾಪ ಎಂದುಕೊಂಡು ಪರಾವಲಂಬಿಗಳಾಗಿ ಉಳಿಯದೆ, ಅದನ್ನು ಮೀರಿ ವಲಂಬನೆಯತ್ತ ದಾಪುಗಾಲು ಇರಿಸಿರುವ ಇವರ ಯಶೋಗಾಥೆ ಎಲ್ಲ ಅಂಗಗಳು ಸರಿಯಿದ್ದೂ ಶ್ರಮ ವಹಿಸದವರಿಗೆ ಆದರ್ಶವಾಗಿದೆ.ಅನುಕಂಪವನ್ನು ಬಯಸದೆ, ಎಲ್ಲರ ಪ್ರೀತಿ, ವಿಶ್ವಾಸ, ಸ್ನೇಹಕ್ಕೆ ಹಾತೊರೆಯುತ್ತ ದಿನನಿತ್ಯದ ಕಾಯಕಕ್ಕೆ ಆದ್ಯತೆ ನೀಡುವ ಇಂತಹ ನಾಲ್ವರು ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದಲ್ಲಿದ್ದಾರೆ.

ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಲ್ಲದೆ ತಮ್ಮನ್ನೇ ಅವಲಂಬಿಸರುವವರ ಜೀವನಕ್ಕೂ ಆಸರೆಯಾಗಿರು ಈ ಕಲಿಗಳ ದಿನಚರಿ, ಶ್ರಮ, ಸಾಹಸದ ವಿವರ ಇಲ್ಲಿದೆ.

ಶಿಕ್ಷಣವೇ ಶಕ್ತಿಪೋಲಿಯೊದಿಂದಾಗಿ ಚಿಕ್ಕಂದಿನಲ್ಲೇ ಎಡಗಾಲು ಸ್ವಾಧೀನ ಕಳೆದುಕೊಂಡಿದ್ದರಿಂದ ಪರಿತಪಿಸಿರುವ ಕೊಳಗಲ್ಲಿನ ಯುವರಾಜ, ಶಿಕ್ಷಣದಿಂದ ಸಾಧನೆ ಸಾಧ್ಯ ಎಂಬುದನ್ನು ಅರಿತವರು. ಬಡತನವಿದ್ದರೂ ಕಷ್ಟಪಟ್ಟು ಓದಿ, 2009ರಲ್ಲಿ ಬಿ.ಕಾಂ ಪದವಿ ಪಡೆದಿರುವ ಇವರು, ಗಾರ್ಮೆಂಟ್‌ ಉದ್ಯಮಕ್ಕೆ ಪೂರಕವಾದ ಕೆಲಸ ಮಾಡುವ ಉದ್ದೇಶದಿಂದ ಅಂಗವಿಕಲ ಸ್ನೇಹಿತರನ್ನೇ ಒಳಗೊಂಡ ತಂಡ ಕಟ್ಟಿಕೊಂಡು, ಹೊಲಿಗೆ ಯಂತ್ರಗಳನ್ನು  ಇಟ್ಟುಕೊಂಡಿದ್ದರು. ಆ ಕೆಲಸದಲ್ಲಿ ನಷ್ಟ ಅನುಭವಿಸಿದ್ದರಿಂದ ಕೈಬಿಟ್ಟು ಇದೀಗ ಮೊಬೈಲ್ ಅಂಗಡಿಯೊಂದರಲ್ಲಿ ಅಕೌಂಟಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಸಿಕ ₨ 7000 ಸಂಬಳ ದೊರೆಯುತ್ತಿದ್ದು, ನಿತ್ಯವೂ ಸ್ವಂತದ ದ್ವಿಚಕ್ರ ವಾಹನದಲ್ಲಿ ಊರಿನಿಂದ ಬಳ್ಳಾರಿಗೆ ಬಂದು ಕೆಲಸ ಮುಗಿಸಿ ವಾಪಸ್‌ ಹೋಗುತ್ತಾರೆ. ಶಿಕ್ಷಣ ಶಕ್ತಿ ಇದ್ದಂತೆ. ಅಂಗವಿಕಲರೂ ಮುಖ್ಯವಾಹಿನಿಗೆ ಬರುವುದಕ್ಕೆ ವಿದ್ಯೆ ನೆರವಾಗುತ್ತದೆ ಎಂಬುದನ್ನು ಮನಗಂಡಿರುವ ಇವರು, ಇತರ ಅಂಗವಿಕಲರಿಗೂ ವಿದ್ಯಾವಂತರಾಗಿ ಎಂದು ಹೇಳುತ್ತ, ಸಾಕ್ಷರತೆಯ ಜಾಗೃತಿ ಮೂಡಿಸುತ್ತಿದ್ದಾರೆ.

‘ಪದವಿ ಮುಗಿದ ಕೂಡಲೇ ಸ್ನಾತಕೋತ್ತರ ಪದವಿ ಪಡೆಯಬೇಕು ಎಂಬ ಆಸೆ ಇತ್ತು. ಆದರೆ, ಎಂ.ಕಾಂ ಮಾಡಲು ದೂರದ ಗುಲ್ಬರ್ಗಕ್ಕೆ ಹೋಗುವ ಅನಿವಾರ್ಯತೆ ಇದ್ದುದರಿಂದ ಆಸೆ ಕೈಬಿಟ್ಟೆ. ಈಗ ನಮ್ಮಲ್ಲೇ ವಿಶ್ವವಿದ್ಯಾಲಯ ಆರಂಭವಾಗದ್ದು, ಸಾಧ್ಯವಾದರೆ ಉನ್ನತ ಶಿಕ್ಷಣ ಪಡೆಯುತ್ತೇನೆ’ ಎಂದು ಅವರು ಹೇಳುತ್ತಾರೆ.

ಕುರಿಗಳೇ ಆಸರೆ
ಕೊಳಗಲ್‌ನ ಶೇಖಣ್ಣ ಅವರ ಮಗ ಹೊನ್ನೂರಸ್ವಾಮಿ ಅವರೂ ಪೋಲಿಯೊ  ಪೀಡಿತರಾಗಿ ಬಲಗಾಲು ಸ್ವಾಧೀನ ಕಳೆದುಕೊಂಡಿದ್ದರೂ, ಸ್ವಾವಲಂಬೀ ಜೀವನದ ಕನಸು ಕಂಡು ನನಸಾಗಿಸಿಕೊಂಡಿದ್ದಾರೆ.

ಹತ್ತಾರು ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿರುವ ಇವರಿಗೆ ನಿತ್ಯವೂ ಅವುಗಳ ಲಾಲನೆ, ಪಾಲನೆಯದೇ ಕೆಲಸ. ಒಂದು ಕಾಲು ಅನುಪಯುಕ್ತವಾಗಿದ್ದರೂ ಊರುಗೋಲಿನ ಸಹಾಯದಿಂದಲೇ ನಿತ್ಯವೂ ಕುರಿಗಳನ್ನು ಮೇಯಿಸಿಕೊಂಡು ಬರುವ ಇವರು, ಕುರಿಗಳನ್ನು ದೊಡ್ಡಿಯಲ್ಲಿ ಕಟ್ಟಿ ಹಾಕಿ, ಹಾಲು ಹಿಂಡಿಕೊಳ್ಳುವ ಕೆಲಸವನ್ನೂ ತಾವೇ ನಿರ್ವಹಿಸುತ್ತಾರೆ.

ಕುರಿ ಹಾಲು ಮಾರಾಟ, ಕುರಿಯ ಉಣ್ಣೆ ಮಾರಾಟ, ಕುರಿಗಳ ಮಾರಾಟದಿಂದ ಜೀವನ ನಿರ್ವಹಿಸುತ್ತಿರುವ ಇವರು ಕುರಿ ಮೇಯಿಸಲು ದೂರದ ಊರುಗಳಿಗೂ ತೆರಳುವುದುಂಟು. ಇತ್ತೀಚೆಗಷ್ಟೇ ಮದುವೆಯಾಗಿರುವ ಇವರು ಸಂತಸದ ಜೀವನ ನಡೆಸುತ್ತಿದ್ದಾರೆ.
‘ಹೆಚ್ಚು ಹೆಚ್ಚು ಕುರಿ ಸಾಕಬೇಕೆಂಬ ಕೆಚ್ಚು ಇದೆ. ಆದರೆ, ಸರ್ಕಾರವಾಗಲಿ, ಯಾವುದೇ ಬ್ಯಾಂಕ್‌ಗಳಾಗಲಿ ಸಾಲ ಸೌಲಭ್ಯ ನೀಡಲು ಮುಂದೆ ಬಾರದ್ದರಿಂದ ಕುರಿ ಸಾಕಣೆಯನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುತ್ತಿಲ್ಲ’ ಎಂದು ಇವರು ನೋವು ತೋಡಿಕೊಳ್ಳುತ್ತಾರೆ.

ವ್ಯವಸಾಯವೇ ಪ್ರಧಾನ
ಓದಿನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಅಂಗವಿಕಲ ಯುವಕ ದೊಡ್ಡಬಸಪ್ಪ ವ್ಯವಸಾಯವನ್ನೇ ನೆಚ್ಚಿಕೊಂಡು ನಿತ್ಯ ಭೂಮಿ ತಾಯಿಯ ಸಾಂಗತ್ಯದಲ್ಲೇ ದುಡಿಮೆ ಕಂಡುಕೊಂಡಿದ್ದಾರೆ.

ನೀರಾವರಿ ಜಮೀನಿನಲ್ಲಿ ಹತ್ತಿ, ಭತ್ತ, ಮೆಣಸಿನಕಾಯಿ ಬೆಳೆಯುತ್ತ, ನಿತ್ಯವೂ ಕಾಲುವೆಯ ನೀರನ್ನು ಬೆಳೆಗೆ ಹರಿಸುವುದಲ್ಲದೆ, ವ್ವವಸಾಯದ ಎಲ್ಲ ಮಜಲುಗಳನ್ನೂ ಬಲ್ಲವರಾಗಿದ್ದಾರೆ.


ಪೋಲಿಯೊದಿಂದಾಗಿ ಇವರ ಬಲಗಾಲು ಚಿಕ್ಕ ವಯಸ್ಸಲ್ಲೇ ಸ್ವಾಧೀನ ಕಳೆದುಕೊಂಡಿದೆ. ಅಪ್ಪ, ಅಮ್ಮ ಸಹ ತೀರಿ ಹೋಗಿದ್ದಾರೆ. ಮೊದಲು ಕೃಷಿ ಕೂಲಿ ಮಾಡುತ್ತಿದ್ದ ಇವರು ಇದೀಗ ಅವರಿವರ ಜಮೀನು ಗುತ್ತಿಗೆಗೆ ಪಡೆದು ಸ್ವಯಂ ಕೃಷಿ ಆರಂಭಿಸಿದ್ದಾರೆ. ಊರುಗೋಲಿನ ಸಹಾಯವನ್ನೂ ಪಡೆಯದೆ ನಿತ್ಯ ಜಮೀನಿಗೆ ತೆರಳಿ ಎಲ್ಲ ರೀತಿಯ ಕೆಲಸದಲ್ಲೂ ತೊಡಗುವುದು ಇವರ ಕಾಯಕ.

ಮದುವೆಯಾಗಿ ಗೃಹಸ್ಥಾಶ್ರಮಕ್ಕೂ ಕಾಲಿರಿಸಿರುವ ಇವರಿಗೆ ಕೆಲಸ ಇಲ್ಲದಿದ್ದರೆ ಸಮಯ ಕಳೆಯುವುದು ಹೇಗೆ ಎಂಬುದೇ ಚಿಂತೆಯಂತೆ.
‘ನನಗೆ ಅಂಗವೈಕಲ್ಯ ಎಂದೂ ಶಾಪವಾಗಿಲ್ಲ. ನಾನೂ ಆ ರೀತಿ ಅಂದುಕೊಂಡಿಲ್ಲ’ ಎಂದು ತಿಳಿಸುವ ಇವರು, ಒಂದರ್ಥದಲ್ಲಿ, ‘ಕಾಯಕವೇ ಕೈಲಾಸ’ ಎಂಬ ಮಾತನ್ನು ನಿತ್ಯ ಜಪಿಸುತ್ತ ಕೊಳಗಲ್‌ನ ಮಾದರಿ ಕೃಷಿಕರಾಗಿದ್ದಾರೆ.

ಬುಟ್ಟಿ, ಬಟ್ಟೆಯೇ ಜೀವನ
ಕೊಳಗಲ್ಲು ಗ್ರಾಮದ ಕೊರಸರ ರಾಮಪ್ಪ ಅವರ ಪುತ್ರಿ ಹುಲಿಗೆಮ್ಮ ಅಂಗವೈಕಲ್ಯದ ಬಗ್ಗೆ ಚಿಂತಿಸದೆ ಮುನ್ನುಗ್ಗುತ್ತಿರುವ ಯುವತಿ.
ಬೆನ್ನು ಗೂನಿನ ದೌರ್ಬಲ್ಯದಿಂದ ಬಳಲುತ್ತಿರುವ ಇವರು, ಆ ದೌರ್ಬಲ್ಯವನ್ನು ಮೆಟ್ಟಿ ನಿಂತು, ಗೃಹ ಕೈಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಮೂಲಕ  ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ.

ಬಿದಿರಿನ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಲೇ, ಕೃಷಿ ಕೂಲಿಗೂ ತೆರಳುವ ಇವರು ಸ್ವಂತದ ರಾಟೆ ಇಟ್ಟುಕೊಂಡು ಬಟ್ಟೆ ಹೊಲಿಯುತ್ತಾರೆ.

ಇವರ ಬಳಿ ಬಟ್ಟೆ ಹೊಲಿಸಿಕೊಳ್ಳುವುದನ್ನೇ ಇಷ್ಟಪಡುವ ಮಹಿಳೆಯರಿಗೆ ಈ ಯುವತಿಯೆಂದರೆ ಅಚ್ಚುಮೆಚ್ಚು. ಊರಿನ ಅಭಿಮಾನದ ಟೇಲರ್‌ ಆಗಿ ಹೊರಹೊಮ್ಮಿರುವ ಹುಲಿಗೆಮ್ಮ ತನ್ನ ಕೈಚಳಕದಿಂದ ಅಂದವಾದ ಬುಟ್ಟಿ ಹೆಣೆದು, ಮಾರಾಟ ಮಾಡುವುದನ್ನೂ ರೂಢಿಸಿಕೊಂಡು ಇತರ ಯುವತಿಯರಿಗೆ ಆದರ್ಶವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT