
ಕೂಡ್ಲಿಗಿ: ಆಡುಭಾಷೆಯಲ್ಲಿ ನೀರಲಹಣ್ಣೆಂದೇ ಪರಿಚಿತವಾಗಿರುವ ನೇರಳೆಹಣ್ಣು ಒಗರು, ಸಿಹಿ ಮಿಶ್ರಿತವಾದ, ತಿಂದರೆ ಬಾಯೆಲ್ಲ ನೇರಳೆ ಬಣ್ಣ ನೀಡುವ ಹಣ್ಣು. ಅಧರಕ್ಕೂ ಉದರಕ್ಕೂ ಸಿಹಿಯಾಗಿರುವ ನೇರಳೆಹಣ್ಣು ಜೂನ್ ತಿಂಗಳಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ತಾಲ್ಲೂಕಿನ ಕಕ್ಕುಪ್ಪಿ, ಸೂಲದಹಳ್ಳಿಗಳಲ್ಲಿ ಹೇರಳವಾಗಿ ನೇರಳೆಹಣ್ಣುಗಳು ದೊರೆಯುತ್ತವೆ. ಇದರ ಹಿಂದೆ ಲಕ್ಷಾಂತರ ರೂಪಾಯಿಗಳ ವಹಿವಾಟವೂ ಇದೆ.
ಸುಮಾರು 30 ಮೀಟರ್‌ಗಳಷ್ಟು ಎತ್ತರ ಬೆಳೆಯುವ ನೇರಳೆಹಣ್ಣಿನ ಮರ `ಸಿಜಿಗಿಯಮ್ ಕುಮಿನಿ' ಎಂಬ ಸಸ್ಯವರ್ಗಕ್ಕೆ ಸೇರಿದೆ. ಈ ಮರ 100 ವರ್ಷಗಳವರೆಗೆ ಬಾಳುತ್ತದೆ. ಮೊದಲೆಲ್ಲ ರೈತರು ತಮ್ಮ ಹೊಲಗಳ ಬೇಲಿ ಸಾಲಿನಲ್ಲಿ ಇವುಗಳನ್ನು ಬೆಳೆಯುತ್ತಿದ್ದರು.
ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿದೆ. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ್, ಏಪ್ರಿಲ್‌ನಲ್ಲಿ ನೇರಳೆಮರ ಹೂ ಬಿಡಲಾರಂಬಿಸುತ್ತದೆ. ನಂತರ ಹಸಿರು ಬಣ್ಣದ ಪುಟ್ಟಕಾಯಿಗಳು ಗೊಂಚಲು ಗೊಂಚಲಾಗಿ ಕಾಣಿಸಿಕೊಳ್ಳುತ್ತವೆ. ತಿಳಿಗುಲಾಬಿ ಬಣ್ಣಕ್ಕೆ ತಿರುಗುವ ಕಾಯಿಗಳು ಬೆಳೆದು ಹಣ್ಣಾಗತೊಡಗಿದಂತೆ ಗಾಢ ನೀಲ ಬಣ್ಣವನ್ನು ಹಾಗೂ ತೀವ್ರ ಹೊಳಪನ್ನು ಹೊಂದುತ್ತವೆ.
ಮರದಲ್ಲಿಯೇ ಹಣ್ಣಾಗುವ ನೇರಳೆಹಣ್ಣುಗಳನ್ನು ಕೂಲಿಯಾಳುಗಳಿಂದ ಬಿಡಿಸಲಾಗುತ್ತದೆ. ಕಕ್ಕುಪ್ಪಿಯೊಂದರಲ್ಲೇ ಸುಮಾರು 50 ಮರಗಳಿವೆ ಎಂದು ತೋಟಗಾರಿಕೆ ಇಲಾಖೆಯ ಮೂಲಗಳು ತಿಳಿಸುತ್ತವೆ. ಜೂನ್ ತಿಂಗಳಾದ್ಯಂತ ಹಣ್ಣು ಕೊಡುವ ಒಂದು ಮರ ಒಟ್ಟು 2 ಕ್ವಿಂಟಲ್‌ನಷ್ಟು ಹಣ್ಣುಗಳನ್ನು ಕೊಡುತ್ತದೆ.
ಪ್ರತಿದಿನವೂ 120-140 ಕೆ.ಜಿಯಷ್ಟು ಹಣ್ಣನ್ನು ಒಂದು ಮರ ಕೊಡುತ್ತದೆ. ಒಂದು ಮರದಿಂದ ಪ್ರತಿದಿನಕ್ಕೆ ಕನಿಷ್ಠ 3,000 ರೂಪಾಯಿಗಳನ್ನು ಪಡೆಯಬಹುದಾಗಿದೆ. ಒಂದು ಮರಕ್ಕೆ 12,000 ರೂ.ಗಳಂತೆ ಗುತ್ತಿಗೆದಾರರು ಗುತ್ತಿಗೆ ಹಿಡಿಯುತ್ತಾರೆ. ನಗರ ಪ್ರದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುವ ದೊಡ್ಡಗಾತ್ರದ ನೇರಳೆಹಣ್ಣುಗಳು ಪ್ರತಿ ಕೆ.ಜಿಗೆ 100-150 ರೂ.ಗಳಂತೆ ಮಾರಾಟಗೊಳ್ಳುತ್ತವೆ.
ಇತ್ತೀಚೆಗೆ ಮಳೆ ಕಡಿಮೆಯಾಗುತ್ತಿರುವುದರಿಂದ, ರೈತರು ಪರ್ಯಾಯ ಬೆಳೆಯಾಗಿ ನೇರಳೆಹಣ್ಣನ್ನು ಬೆಳೆಯಬಹುದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಯೋಗೇಶ್ವರ್ ತಿಳಿಸಿದರು. ನೇರಳೆಹಣ್ಣಿನ ಮರಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲದಿರುವುದರಿಂದ, ಅಂತರ್ಜಲ ಕಡಿಮೆಯಾಗುತ್ತಿರುವ ಈ ಸಂದರ್ಭದ್ಲ್ಲಲಿ ರೈತರು ನೇರಳೆಹಣ್ಣನ್ನು ಬೆಳೆಯಬಹುದಾಗಿದೆ ಆದರೆ ಹಣ್ಣನ್ನು ಪಡೆಯಲು ಸಾಕಷ್ಟು ಅವಧಿ ಕಾಯಬೇಕಾಗಿರುವುದರಿಂದ ರೈತರು ಈ ಹಣ್ಣಿನ ಕಡೆ ಲಕ್ಷ್ಯ ವಹಿಸುತ್ತಿಲ್ಲ ಎಂದರು.
ತಾಲ್ಲೂಕಿನ ಹಣ್ಣುಗಳನ್ನು ಚಿತ್ರದುರ್ಗ, ಬಳ್ಳಾರಿಯಲ್ಲದೆ, ಹೊರರಾಜ್ಯದ ನಗರಗಳಾದ ಕರ್ನೂಲು, ಅನಂತಪುರಗಳಿಗೂ ಕಳಿಸಲಾಗುವುದು. ಗಾತ್ರದಲ್ಲಿ ದೊಡ್ಡದಾಗಿರುವ, ಸವಿಯಾಗಿರುವ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಹಣ್ಣುಗಳನ್ನು 3 ದಿನಗಳವರೆಗೆ ಸಂರಕ್ಷಿಸಬಹುದಾಗಿದೆ. ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೆ ಹಣ್ಣುಗಳನ್ನಿಟ್ಟು ತಿನ್ನಬಹುದಾಗಿದೆ.
ನೇರಳೆಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎಂದು ವೈದ್ಯರು ಹೇಳುತ್ತಾರೆ.
ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮವಾದುದಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆಹಣ್ಣುಗಳನ್ನು ತಿಂದರೆ ಕಾಯಿಲೆಯನ್ನು ನಿಯಂತ್ರಿಸಬಹುದೆಂದು ವೈದ್ಯವಿಜ್ಞಾನ ತಿಳಿಸುತ್ತದೆ. ಸವಿ, ಒಗರು ರುಚಿಯನ್ನು ಹೊಂದಿರುವ ನೇರಳೆಹಣ್ಣನ್ನು ಉಪ್ಪಿನೊಂದಿಗೆ ತಿಂದರೆ ಬಲುರುಚಿ. ಪಟ್ಟಣದ ಮಾರುಕಟ್ಟೆಯ ತುಂಬ ಇದೀಗ ನೇರಳೆಹಣ್ಣಿನ ಮಾರಾಟದ ಭರಾಟೆ ಆರಂಭಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.