ADVERTISEMENT

‘ಗೊಂದಲ, ಊಹಾಪೂಹಕ್ಕೆ ಆಸ್ಪದ ಬೇಡ’

ವಿದ್ಯುನ್ಮಾನ ಮತಯಂತ್ರ, ಮತದಾನ ಖಾತ್ರಿ ಯಂತ್ರ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 5:47 IST
Last Updated 17 ಏಪ್ರಿಲ್ 2018, 5:47 IST
ಹೂವಿನಹಡಗಲಿ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಎಂ.ಎಸ್.ದಿವಾಕರ ಇವಿಎಂ ಹಾಗೂ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಿದರು.
ಹೂವಿನಹಡಗಲಿ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಎಂ.ಎಸ್.ದಿವಾಕರ ಇವಿಎಂ ಹಾಗೂ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಿದರು.   

ಹೂವಿನಹಡಗಲಿ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ಮತದಾನ ಖಾತ್ರಿ ಯಂತ್ರ (ವಿವಿಪ್ಯಾಟ್‌) ಪ್ರಾತ್ಯಕ್ಷಿಕೆ ಜರುಗಿತು.

ಮತಯಂತ್ರದ ಮೂಲಕ ಚಲಾಯಿಸುವ ಮತವು ವಿವಿ ಪ್ಯಾಟ್‌ನಲ್ಲಿ ಗೋಚರಿಸುವ ಕುರಿತು ಕ್ಷೇತ್ರ ಚುನಾವಣಾಧಿಕಾರಿ ಎಂ.ಎಸ್.ದಿವಾಕರ ಮಾಹಿತಿ ನೀಡಿದರು.

‘ಪ್ರತಿ ಮತದಾನ ತಾನು ಚಲಾಯಿಸಿದ ಮತವನ್ನು ವಿವಿ ಪ್ಯಾಟ್‌ ಯಂತ್ರದಲ್ಲಿ ಸುಲಭವಾಗಿ ಖಾತ್ರಿ ಪಡಿಸಿಕೊಳ್ಳಬಹುದು. ಮತಯಂತ್ರದಲ್ಲಿ ಮತ ಚಲಾಯಿಸುತ್ತಿದ್ದಂತೆ ಪಕ್ಕದಲ್ಲಿರುವ ವಿವಿ ಪ್ಯಾಟ್‌ನಲ್ಲಿ ಅಭ್ಯರ್ಥಿಯ ಸಂಖ್ಯೆ ಹಾಗೂ ಚಿಹ್ನೆಯು ಏಳು ಸೆಕೆಂಟ್‌ವರೆಗೆ ಕಾಣುತ್ತದೆ. ನಂತರ ಬ್ಯಾಲೆಟ್‌ ಚೀಟಿಯು ಬಾಕ್ಸ್‌ನಲ್ಲಿ ಸಂಗ್ರಹವಾಗುತ್ತದೆ’ ಎಂದು ವಿವರಿಸಿದರು.

ADVERTISEMENT

ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಚುನಾವಣಾ ಆಯೋಗ ವಿವಿಪ್ಯಾಟ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಯಾವುದೇ ಗೊಂದಲ, ಊಹಾಪೋಹಗಳಿಗೆ ಆಸ್ಪದವಿಲ್ಲದಂತೆ ಎಲ್ಲ ಮತದಾರರು ತಮ್ಮ ಮತವನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

‘ಮತಯಂತ್ರದಲ್ಲಿ ದಾಖಲಿಸಿದ ಮತಕ್ಕೂ ವಿವಿ. ಪ್ಯಾಟ್‌ನಲ್ಲಿ ಪ್ರದರ್ಶನಗೊಂಡ ಮತಕ್ಕೂ ವ್ಯತ್ಯಾಸಗಳಿವೆ ಎಂದು ಯಾವುದೇ ಮತದಾರ ತಗಾದೆ ತೆಗೆದಲ್ಲಿ ಅಂತಹ ಮತದಾರನಿಂದ 49 ಎಂ.ಎ. ಘೋಷಣಾ ಪತ್ರಕ್ಕೆ ಸಹಿ ಪಡೆದುಮತಗಟ್ಟೆ ಅಧಿಕಾರಿ ಹಾಗೂ ಏಜೆಂಟರ ಸಮ್ಮುಖದಲ್ಲಿ ಮತ್ತಿಮ್ಮೆ ಮತ ಚಲಾಯಿಸಲು ಅವಕಾಶ ನೀಡಲಾಗುವುದು. ಆಗ ವಿವಿ ಪ್ಯಾಟ್‌ನಲ್ಲಿ ಸರಿಯಾದ ರೀತಿಯಲ್ಲಿ ಮತವು ಪ್ರದರ್ಶನವಾದಲ್ಲಿ ಸುಳ್ಳು ಹೇಳಿದ್ದಕ್ಕಾಗಿ ಘೋಷಣೆ ಪತ್ರ ನೀಡಿದ ಮತದಾರನಿಗೆ ಸ್ಥಳದಲ್ಲೇ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು. ಒಂದು ವೇಳೆ ವಿವಿಪ್ಯಾಟ್‌ದಲ್ಲಿ ದೋಷ ಇರುವುದು ಖಚಿತವಾದಲ್ಲಿ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ನಾಮಪತ್ರ ಸಲ್ಲಿಕೆ ಇಂದಿನಿಂದ : ವಿಧಾನಸಭಾ ಚುನಾವಣಾ ನಾಮಪತ್ರ ಸಲ್ಲಿಕೆ ಇಂದಿನಿಂದ 24ರವರೆಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 25ರಂದು ನಾಮಪತ್ರಗಳ ಪರಿಶೀಲನೆ, 27 ರಂದು ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಹಿಂತೆದುಕೊಳ್ಳಲು ಅವಕಾಶವಿದೆ ಎಂದು ಎಂ.ಎಸ್.ದಿವಾಕರ ತಿಳಿಸಿದರು.

ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿ ಐದು ಜನರಿಗೆ ಚುನಾವಣಾಧಿಕಾರಿ ಕಚೇರಿಗೆ ಬರಲು ಅವಕಾಶ ನೀಡಲಾಗುವುದು. ನಾಮಪತ್ರದ ಜತೆಗೆ ಅರ್ಜಿ ನಮೂನೆ–26 ಆಸ್ತಿ ಋಣಪತ್ರ ಹಾಗೂ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಬೇಬಾಕಿ ಪ್ರಮಾಣ ಪತ್ರ ನೀಡಬೇಕಿದೆ. ನಾಮಪತ್ರದ ಎಲ್ಲ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು, ಖಾಲಿ ಬಿಟ್ಟಲ್ಲಿ ನಾಮಪತ್ರ ತಿರಸ್ಕೃತಗೊಳಿಸಲಾಗುವುದು ಎಂದು ಹೇಳಿದರು.

ಸೇವಾ ಮತದಾರರಿಗೆ ಆನ್‌ಲೈನ್‌ನಲ್ಲಿ ಮತಪತ್ರ ರವಾನೆ : ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಾಲ್ಲೂಕಿನ 51 ಜನ ಸೇವಾ ಮತದಾರರಿಗೆ ಇಟಿಪಿಬಿಎಸ್ ಆನ್‌ಲೈನ್‌ ಮೂಲಕ ಮತಪತ್ರಗಳನ್ನು ಕಳಿಸಿಕೊಡಲಾಗುವುದು ಎಂದು ತಿಳಿಸಿದರು. ಎಂಜಿನಿಯರ್ ಕಿರಣ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.