ADVERTISEMENT

ಗ್ರಾಮೀಣ ಬ್ಯಾಂಕ್ ನೌಕರರ ಧರಣಿ ಎಂಟನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:35 IST
Last Updated 15 ಸೆಪ್ಟೆಂಬರ್ 2011, 6:35 IST

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಗತಿ ಗ್ರಾಮೀಣ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಸಂಘ ನಡೆಸುತ್ತಿರುವ ಧರಣಿ ಬುಧವಾರ 8ನೇ ದಿನಕ್ಕೆ ಕಾಲಿರಿಸಿದೆ.ಸಿಬ್ಬಂದಿಯು ಎಂಟು ದಿನಗಳಿಂದ ಧರಣಿ ನಡೆಸುತ್ತಿದ್ದರೂ, ಆಡಳಿತ ಮಂಡಳಿಯು ಸ್ಪಂದಿಸಿಲ್ಲ ಎಂದು ಆರೋಪಿಸಿದ ದಿನಗೂಲಿ ನೌಕರರು, ಬುಧವಾರ ನಗರದ ವಿವಿಧ ರಸ್ತೆಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಸವೇಶ್ವರ ಬಡಾವಣೆಯ ಪ್ರಧಾನ ಕಚೇರಿ ಎದುರು ಧರಣಿ  ನಡೆಸುತ್ತಿರುವ ಸಿಬ್ಬಂದಿಯನ್ನು ಆಡಳಿತ ಮಂಡಳಿ ಮುಖ್ಯಸ್ಥರು ಭೇಟಿಯಾಗಿ ಸಮಾಲೋಚನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ಸುಪ್ರೀಂ ಕೊರ್ಟ್ ಆದೇಶವಿದ್ದರೂ ಪ್ರಗತಿ ಗ್ರಾಮೀಣ ಬ್ಯಾಂಕ್ ಆಡಳಿತ ಮಂಡಳಿ ಕೆನರಾ ಬ್ಯಾಂಕ್ ನೌಕರರಿಗೆ ನೀಡುವ ಸೌಲಭ್ಯ ನೀಡದೆ ಕೋರ್ಟ್ ಆದೇಶವನ್ನೇ ನಿರ್ಲಕ್ಷಿಸುತ್ತಿರುವುದು ಸೋಜಿಗದ ಸಂಗತಿಯಾಗಿದೆ.
 
ವಾಣಿಜ್ಯ ಬ್ಯಾಂಕ್‌ಗಳ ಮಾದರಿಯಲ್ಲೇ ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು ಕೆಲಸ ಮಾಡುತ್ತಿದ್ದರೂ ಸೌಲಭ್ಯ ಒದಗಿಸುವಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು.

ಬ್ಯಾಂಕ್‌ನ ಎಂಟು ಜಿಲ್ಲೆಗಳ ನೌಕರರು ಕಳೆದ ಎಂಟು ದಿನಗಳಿಂದ ಸರದಿಯಂತೆ ಧರಣಿ ನಡೆಸುತ್ತಿದ್ದು, ಉಗ್ರ ಸ್ವರೂಪದ ಹೋರಾಟ ನಡೆಸುವ ಅಗತ್ಯವಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.