ಬಳ್ಳಾರಿ: ಬೇಸಿಗೆಯ ವೇಳೆ ಕುಡಿಯುವ ನೀರು ದೊರೆಯದೆ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಒಟ್ಟು 33 ಗ್ರಾಮಗಳಲ್ಲಿ ತೀವ್ರ ತೊಂದರೆ ಎದುರಾಗಿದ್ದು, ಕೂಡಲೇ ಹಗರಿ ನದಿಗೆ ಎಲ್.ಎಲ್.ಸಿ. ಕಾಲುವೆಯಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಅರುಣಾ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹಗರಿ ನದಿ ದಡದಲ್ಲಿರುವ ಸಿರುಗುಪ್ಪ ತಾಲ್ಲೂಕಿನ ಬಸರಕೋಡ, ಹಡ್ಲಿಗಿ, ತಾಳೂರು, ಊಳೂರು, ಉತ್ತನೂರು, ಮಾಟಸುಗೂರು, ಕೂರಿಗನೂರು, ಬೂದುಗುಪ್ಪ, ಮೈಲಾಪುರ, ಬಲಕುಂದಿ, ಹಾಗಲೂರು, ಪೊಪ್ಪನಾಳು, ಅರಳಿಗನೂರು, ಬಗ್ಗೂರು, ಚಾಣಕನೂರು, ಕರ್ಚಿಗನೂರು, ಗಜಗಿನಹಾಳು, ಕುಡುದ್ರಾಳು, ಕೆಸರುಕೋಣಿ, ನಾಗಲಾಪುರ, ಶ್ರೀಧರಗಡ್ಡೆ, ಹಳೇಕೋಟೆ, ಕುರುವಳ್ಳಿ, ಟಿ.ರಾಂಪುರ, ತೊಂಡೆಹಾಳ್, ರಾರಾವಿ, ಶಾಲಿಗನೂರು, ಕೋಟೆಹಾಳ್, ಸುಗೂರು, ಹಿರೇಹಾಳ್, ಮುದೇನೂರು, ಕೆ.ಬೆಳಗಲ್, ಮಾರ್ಲಮಡಿಕೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಹಗರಿ ನದಿಗೆ ಕಾಲುವೆಯಿಂದ ನೀರು ಬಿಟ್ಟರೆ ಜನ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಕೋರಲಾಯಿತು.
ಬೇಸಿಗೆ ಮುಗಿಯುವವರೆಗೂ ವಾರಕ್ಕೊಮ್ಮೆ ನದಿಗೆ ನೀರು ಹರಿಸುವುದರಿಂದ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಳ್ಳಲಾಯಿತು.ಜಿ.ಪಂ. ಅಧ್ಯಕ್ಷೆ ಜೆ.ಅರುಣಾ, ಸದಸ್ಯರಾದ ಗೋನಾಳ್ ರಾಜಶೇಖರಗೌಡ, ಬಿ.ವಸಂತಗೌಡ, ನಾಗರತ್ಮಮ್ಮ, ಡಿ.ಸೋಮಪ್ಪ, ಅರಳಿಗನೂರು ತಾ.ಪಂ. ಸದಸ್ಯ ಚೆನ್ನನಗೌಡ, ಗ್ರಾಮಸ್ಥರಾದ ಎಲ್.ಮಾರೆಪ್ಪ, ಎಂ.ಆರ್. ಬಸವನಗೌಡ, ವೀರನಗೌಡ, ಬಸವರಾಜ, ಬಸವನಗೌಡ, ಮರೇಗೌಡ, ಕೆ.ಪಿ. ಚೆನ್ನಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.