ADVERTISEMENT

ಬನ್ನಿಗೋಳ ಗ್ರಾ.ಪಂ.ಗೆ ಸುಮಲತಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 5:59 IST
Last Updated 22 ಡಿಸೆಂಬರ್ 2012, 5:59 IST

ಹಗರಿಬೊಮ್ಮನಹಳ್ಳಿ: ನಾಟಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ, ತಾಲ್ಲೂಕಿನ ಬನ್ನಿಗೋಳ ಗ್ರಾ.ಪಂ.ಗೆ ಎರಡನೇ ಅವಧಿಯ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಗಿರಿಯನ್ನವರ ಸುಮಲತಾ ಹಾಗೂ ಉಪಾಧ್ಯಕ್ಷರಾಗಿ ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮೀನಾಕ್ಷಿಬಾಯಿ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

19ಸದಸ್ಯ ಬಲದ ಗ್ರಾ.ಪಂ.ಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆ ಕಳೆದ ವಾರ ನಿಗದಿಯಾಗಿತ್ತು. ಆದರೆ, ಕಾಂಗ್ರೆಸ್ ಬೆಂಬಲಿತ 10 ಸದಸ್ಯರು ಗೈರಾದ ಪರಿಣಾಮವಾಗಿ ಕೋರಂ ಕೊರತೆಯಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು.

ಕಾಂಗ್ರೆಸ್ ಸದಸ್ಯರೊಬ್ಬರು ಅಡ್ಡ ಮತದಾನ ಮಾಡಿದ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ 10 ಸದಸ್ಯರ ಬೆಂಬಲ ಪಡೆದು ಗಿರಿಯನ್ನವರ ಸುಮಲತಾ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸುಮಂಗಲ ವಿರುದ್ಧ ಜಯ ಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮೀನಾಕ್ಷಿಬಾಯಿ ಬಿಜೆಪಿ ಬೆಂಬಲಿತ ಮಂಜುಳಾ ವಿರುದ್ಧ ಗೆಲುವಿನ ನಗೆ ಬೀರಿದರು.
ಚುನಾವಣಾಧಿಕಾರಿಯಾಗಿ ಜಿ.ಪಂ.ಎಂ.ವಿಭಾಗದ ಎಇಇ ಕೆ.ಬಸಪ್ಪ ನಿರ್ವಹಿಸಿದರು. ಪಿಡಿಒ ಈಶ್ವರಾಚಾರಿ ಮತ್ತು ಸಿಬ್ಬಂದಿ ಸಹಾಯಕರಾಗಿದ್ದರು.

ಅಧಿಕೃತ ಆಯ್ಕೆ ಘೋಷಿಸುತ್ತಿದ್ದಂತೆ ತಾ.ಪಂ. ಸದಸ್ಯೆ ಮೂಲಿ ಸಾವಿತ್ರಮ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷೆ ದುರುಗಮ್ಮ ಶೇಖರಪ್ಪ, ಸದಸ್ಯರಾದ ಪೂಜಾರ್ ಚಂದ್ರಪ್ಪ, ಉಪ್ಪಾರ ಬಸವರಾಜ, ಮುಖಂಡರಾದ ಮೂಲಿ ರವಿಪ್ರಸಾದ್, ಮೈನಳ್ಳಿ ಕೊಟ್ರೇಶ್, ಕಾಗಿ ಮಾರುತೇಶ್, ನಂದೆಪ್ಪನವರ ಮಂಜುನಾಥ್, ಪೂಜಾರ್ ಫಕೀರಪ್ಪ, ಗಿರಿಯನ್ನರ ಹುಲುಗಪ್ಪ, ಮುತ್ತವ್ವನ ಮೈಲಪ್ಪ, ದುರುಗಪ್ಪ ಹಾಗೂ ಬಂಗಾಳಿ ಶೇಖ್ರಪ್ಪ ಮತ್ತಿತರರು ನೂತನ ಅಧ್ಯಕ್ಷೆಯನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.