ADVERTISEMENT

ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಸ್ಥಳಾಂತರ ಗುಮ್ಮ

ಸಿಂಗಟಾಲೂರು ಏತ ನೀರಾವರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 6:04 IST
Last Updated 10 ಜೂನ್ 2013, 6:04 IST

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆ ಬಲದಂಡೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಬಾಕಿ ಇರುವಾಗಲೇ ಇಲ್ಲಿನ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಗದಗ ಜಿಲ್ಲೆಗೆ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿದ್ದು, ಜಮೀನು ಕಳೆದುಕೊಂಡ ಸಂತ್ರಸ್ತ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಭೂಮಿ ಕಳೆದುಕೊಂಡ ತಾಲ್ಲೂಕಿನ ಬಹುತೇಕ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿ ಸ್ಥಳಾಂತರಗೊಳ್ಳುವ ಸುದ್ದಿ ಕೇಳಿ ಇಲ್ಲಿನ ಸಂತ್ರಸ್ತರು ಕಂಗಾಲಾಗಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಡ ದಂಡೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಅವರು ಇಲ್ಲಿನ ಭೂ ಸ್ವಾಧೀನ ಅಧಿಕಾರಿ ಕಚೇರಿಯನ್ನು ಗದಗ ಜಿಲ್ಲೆಗೆ ಸ್ಥಳಾಂತರಿಸಲು ಮೌಖಿಕ ಆದೇಶ ನೀಡಿದ್ದು, ಸರ್ಕಾರ ಮಟ್ಟದಲ್ಲಿ ಈ ಕುರಿತು ತಯಾರಿ ನಡೆಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಮಹತ್ವಾಕಾಂಕ್ಷೆಯ ಈ ನೀರಾವರಿ ಯೋಜನೆಯಿಂದ ಎಡ ದಂಡೆಯ ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕಡಿಮೆ ಜಮೀನು ಮುಳುಗಡೆಯಾಗಿ ಹೆಚ್ಚಿನ ನೀರಾವರಿ ಸೌಲಭ್ಯ ಆಗುತ್ತಿದೆ. ಬಲದಂಡೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಡಿಮೆ ನೀರಾವರಿ ಸೌಲಭ್ಯ, ಹೆಚ್ಚು ಜಮೀನುಗಳು ಮುಳುಗಡೆಯಾಗುತ್ತಿವೆ. ಆ ಕಾರಣದಿಂದ ಸರ್ಕಾರ ಬಲದಂಡೆಯ ಹಡಗಲಿಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಮಂಜೂರು ಮಾಡಿತ್ತು.

ಹೂವಿನಹಡಗಲಿ ತಾಲ್ಲೂಕಿನ  27088 ಎಕರೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿದ್ದು, ಈ ಪೈಕಿ 17018 ಎಕರೆಗೆ ಮಾತ್ರ ಪರಿಹಾರ ವಿತರಿಸಲಾಗಿದೆ. ಇನ್ನೂ 1070 ಎಕರೆ ಜಮೀನಿಗೆ ಪರಿಹಾರದ ಹಣ ಬಾಕಿ ಇದ್ದು, ಭೂ ಸ್ವಾಧೀನ ಪ್ರಕ್ರಿಯೆ ಅಪೂರ್ಣಗೊಂಡಿದೆ. ಕಳೆದ 2 ವರ್ಷಗಳಿಂದ ಇಲ್ಲಿನ ಕಚೇರಿಗೆ ಅಧಿಕಾರಿ ಇಲ್ಲದಿರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆಗಳೆಲ್ಲವೂ ನೆನಗುದಿಗೆ ಬಿದ್ದಿವೆ.

ಯೋಜನಾ ನಿರಾಶ್ರಿತರ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಬಹುತೇಕ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕಚೇರಿ ಸ್ಥಳಾಂತರಗೊಂಡಲ್ಲಿ ಇಲ್ಲಿನ ರೈತರು 70 ಕಿ.ಮೀ. ದೂರದ ಗದಗ ಜಿಲ್ಲೆಗೆ ಅಲೆದಾಡಬೇಕಾಗುತ್ತದೆ. ಇಲ್ಲಿನ ಎಲ್ಲ ಸಮಸ್ಯೆಗಳು ಇತ್ಯರ್ಥವಾಗುವವರೆಗೂ ಯಾವುದೇ ಕಾರಣಕ್ಕೂ ಕಚೇರಿ ಸ್ಥಳಾಂತರಿಸಬಾರದೆಂದು ಈ ಭಾಗದ ಸಂತ್ರಸ್ತರು ಮನವಿ ಮಾಡಿದ್ದಾರೆ.

ಈ ಹಿಂದೆ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ಆದ ಸಂದರ್ಭದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸಶಸ್ತ್ರ ಮೀಸಲು ಪೊಲೀಸ್ ತರಬೇತಿ ಕೇಂದ್ರ, ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸ್ಥಳಾಂತರದ ಭೀತಿ ಎದುರಾಗಿತ್ತು.

ಪ್ರಗತಿಪರ ಸಂಘಟನೆಗಳ ತೀವ್ರತರದ ಹೋರಾಟದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ಇದೀಗ ಮತ್ತೆ ಸ್ಥಳಾಂತರದ ಗುಮ್ಮ ಹಡಗಲಿಗೆ ವಕ್ಕರಿಸಿರುವುದರಿಂದ ಭೂ ಸ್ವಾಧೀನ ಕಚೇರಿ ಸ್ಥಳಾಂತರದ ಭೀತಿ ಎದುರಿಸುವಂತಾಗಿದೆ.

ಹೂವಿನಹಡಗಲಿಯ ಸರ್ಕಾರಿ ಕಚೇರಿಗಳ ಸ್ಥಳಾಂತರ ವಿರುದ್ಧ ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರೇ ಇಂದು ಅಧಿಕಾರದಲ್ಲಿರುವುದರಿಂದ  ಭೂಸ್ವಾಧೀನ ಅಧಿಕಾರಿ ಕಚೇರಿಯನ್ನು ಇಲ್ಲಿಯೇ ಉಳಿಸಿಕೊಳ್ಳುವ ಮೂಲಕ ಜಮೀನು ಕಳೆದುಕೊಂಡ ಈ ಭಾಗದ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಿಕೊಡುವರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.