ADVERTISEMENT

1 ದಿನದ ಹಂಪಿ ಉತ್ಸವಕ್ಕೆ ₹ 30 ಲಕ್ಷ!

ಪ್ರಸ್ತಾವನೆ ಸಲ್ಲಿಸಿ ಕಾಯುತ್ತಿರುವ ಜಿಲ್ಲಾಡಳಿತ

ಕೆ.ನರಸಿಂಹ ಮೂರ್ತಿ
Published 8 ನವೆಂಬರ್ 2020, 13:09 IST
Last Updated 8 ನವೆಂಬರ್ 2020, 13:09 IST
ಹಂಪಿ ಉತ್ಸವ  (ಸಂಗ್ರಹ ಚಿತ್ರ)
ಹಂಪಿ ಉತ್ಸವ (ಸಂಗ್ರಹ ಚಿತ್ರ)   

ಬಳ್ಳಾರಿ: ವಿರೋಧಗಳ ನಡುವೆಯೂ ಒಂದು ದಿನದ ಹಂಪಿ ಉತ್ಸವವನ್ನು ನ.13ರಂದು ಹಮ್ಮಿಕೊಳ್ಳಲು ನಿರ್ಧರಿಸಿರುವ ಜಿಲ್ಲಾಡಳಿತವು ಅದಕ್ಕಾಗಿ ₹ 30 ಲಕ್ಷ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಕಾಯುತ್ತಿದೆ.

ಕಲಾವಿದರ ಶೋಭಾಯಾತ್ರೆ ಮತ್ತು ತುಂಗಾರತಿ ಸೇರಿದ ಎರಡು ಕಾರ್ಯಕ್ರಮಗಳನ್ನಷ್ಟೇ ಉತ್ಸವದಲ್ಲಿ ಆಯೋಜಿಸಲಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮಗಳೂ ಇಲ್ಲದ ಉತ್ಸವಕ್ಕೆ ಇನ್ನು ಐದು ದಿನಗಳಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ಈ ನಡುವೆ, ಉತ್ಸವವನ್ನು ಮೂರು ದಿನ ನಡೆಸದಿದ್ದರೆ ಮುಂದೂಡಬೇಕು ಅಥವಾ ರದ್ದು ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳೂ ನಡೆದಿವೆ.

ಅನುದಾನದ ಕುರಿತು ‘ಪ್ರಜಾವಾಣಿ’ಗೆ ಭಾನುವಾರ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ‘ಕೊರೊನಾ ಬಾಧೆ ಹೆಚ್ಚಿರುವ ಪ್ರಸಕ್ತ ವರ್ಷದಲ್ಲಿ ಉತ್ಸವವನ್ನು ನಡೆಸದೇ ಇರುವುದು ಸರಿಯಲ್ಲ ಎಂಬ ಕಾರಣಕ್ಕೆ ಆಯೋಜಿಸಲಾಗುತ್ತಿದೆ. ಅನುದಾನ ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.

ADVERTISEMENT

‘ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ನೀಡಬೇಕಾದ ಸಂಭಾವನೆ ಮತ್ತು ತುಂಗಾರತಿಯನ್ನು ನಡೆಸಲು ಬೇಕಾದ ಖರ್ಚು ವೆಚ್ಚವನ್ನು ಪರಿಗಣಿಸಿ ಅನುದಾನ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಮೈಸೂರು ದಸರಾ ಉತ್ಸವ ನಡೆದಿದೆ. ಹಂಪಿ ಉತ್ಸವವನ್ನು ಏಕೆ ಆಯೋಜಿಸಬಾರದು ಎಂದು ಕೇಳುವವರು ಮೈಸೂರು ಉತ್ಸವ ನಡೆದ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಲ್ಲಿ ಎಲ್ಲಿಯೂ 200 ಮಂದಿಗಿಂತ ಹೆಚ್ಚು ಜನ ಪಾಲ್ಗೊಳ್ಳಲು ಅವಕಾಶವಿರಲಿಲ್ಲ. ಅದೇ ರೀತಿಯಲ್ಲೇ ಹಂಪಿ ಉತ್ಸವದಲ್ಲೂ ಹೆಚ್ಚು ಜನ ಒಟ್ಟಿಗೇ ನೆರೆಯಲು ಅವಕಾಶವಾಗಬಾರದು ಎಂಬ ಉದ್ದೇಶ ಜಿಲ್ಲಾಡಳಿತದ್ದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.