ADVERTISEMENT

ಮರಿಯಮ್ಮನಹಳ್ಳಿ: ಗರಿಗೆದರಿದ ಕೃಷಿ ಚಟುವಟಿಕೆ

ಉತ್ತಮ ಮುಂಗಾರು: ಬೀಜ, ಗೊಬ್ಬರ ಮಾರಾಟ ಜೋರು

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 13:20 IST
Last Updated 8 ಜುಲೈ 2023, 13:20 IST
ಮರಿಯಮ್ಮನಹಳ್ಳಿ ಸಮೀಪದ ಗುಂಡಾ ಗ್ರಾಮದ ಬಳಿ ರೈತರು ಶುಕ್ರವಾರ ಬಿತ್ತನೆಯಲ್ಲಿ ತೊಡಗಿದ್ದರು
ಮರಿಯಮ್ಮನಹಳ್ಳಿ ಸಮೀಪದ ಗುಂಡಾ ಗ್ರಾಮದ ಬಳಿ ರೈತರು ಶುಕ್ರವಾರ ಬಿತ್ತನೆಯಲ್ಲಿ ತೊಡಗಿದ್ದರು   

ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಆಗಾಗ ಸುರಿಯುತ್ತಿರುವ ಅಲ್ಪಸ್ವಲ್ಪ ಉತ್ತಮ ಮಳೆ ರೈತರಲ್ಲಿ ಆಶಾಕಿರಣ ಮೂಡಿಸಿದ್ದು, ಬಹುತೇಕ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಈ ಬಾರಿ ಮುಂಗಾರು ಮುನಿಸಿಕೊಂಡ ಪರಿಣಾಮ ಬಿತ್ತನೆಗೆ ಹಿನ್ನೆಡೆಯಾಗಿದ್ದು, ರೈತರು ಮುಗಿಲ ಕಡೆ ನೋಡುವಂತಾಗಿತ್ತು. ಆದರೆ ಅಗಾಗ ಸುರಿಯುತ್ತಿರುವ ಮಳೆಯಿಂದಾಗಿ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ಅನ್ನದಾತರು ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಈ ಭಾಗದ ಪ್ರಮುಖ ಬೆಳೆಯಾದ ಮುಸುಕಿನ ಜೋಳವನ್ನು ಬಹುತೇಕ ರೈತರು ಬಿತ್ತನೆ ಮಾಡುತ್ತಿದ್ದು, ಅಕ್ಕಡಿ ಬೆಳೆಯಾಗಿ ತೊಗರಿಯನ್ನು ಬಿತ್ತುತ್ತಿದ್ದಾರೆ. ಕೆಲ ರೈತರು ಶೇಂಗಾ, ಸಜ್ಜೆ, ರಾಗಿ, ನವಣೆ ಬಿತ್ತುವಲ್ಲಿ ಮುಂದಾಗಿದ್ದರೆ, ನೀರಾವರಿ ಪ್ರದೇಶದಲ್ಲಿ ಭತ್ತದ ಮಡಿಗಳನ್ನು ಮಾಡಿ ನಾಟಿ ಮಾಡಲು ಅಣಿಯಾಗಿದ್ದಾರೆ.

ADVERTISEMENT

ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 7937.20ಹೆಕ್ಟೇರ್ ಪ್ರದೇಶ ಬಿತ್ತನೆಗೆ ಲಭ್ಯವಿದೆ. ಅದರಲ್ಲಿ 6624.79ಹೆ. ಖುಷ್ಕಿ ಹಾಗೂ 1321.31ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದ್ದು, ಈ ಬಾರಿ 5400ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.

ಇನ್ನು ವ್ಯಾಪ್ತಿಯಲ್ಲಿ ಈಗಾಗಲೇ ಶೇ.60ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಮುಸುಕಿನ ಜೋಳ 7500ಎಕರೆ, ಜೋಳ 1500, ಸಜ್ಜೆ 280, ರಾಗಿ 70, ಭತ್ತ 250 ಸೇರಿದಂತೆ ಅಂತರ ಬೆಳೆಯಾಗಿ ತೊಗರಿ 250ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನು ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದು ಸಹ ಕಂಡು ಬರುತ್ತಿದೆ.

‘ನೋಡ್ರಿ ಜೋಳ ಬಿತ್ತನೆಯ ಚಿಂತೆಯಲ್ಲಿದ್ದ ನಮಗೆ ಈ ಬಾರಿ ಮುಂಗಾರು ಕೈಕೊಟ್ಟಿತ್ತು. ಆದರೆ ಈಗ ಸುರಿಯುತ್ತಿರುವ ಅಲ್ಪಸ್ವಲ್ಪ ಉತ್ತಮ ಮಳೆಗೆ ಮುಸುಕಿನ ಜೋಳ ಸೇರಿದಂತೆ ಶೇಂಗಾ ಬಿತ್ತನೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ವ್ಯಾಪ್ತಿಯ ರೈತ ಮಂಜುನಾಥ, ಬಸವರಾಜ.

ಮರಿಯಮ್ಮನಹಳ್ಳಿ ಸಮೀಪದ ಗುಂಡಾ ಗ್ರಾಮದ ಬಳಿ ರೈತರು ಶುಕ್ರವಾರ ಬಿತ್ತನೆಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.