ADVERTISEMENT

ಬಯಲು ನಾಡಿನಲ್ಲಿ ಅಪರೂಪದ ‘ಚಿಯಾ’

ಬಹು ಬೇಡಿಕೆ ಸಿರಿಧಾನ್ಯ ಬೆಳೆದ ರೈತ

ರಾಮಚಂದ್ರ ನಾಗತಿಕಟ್ಟೆ
Published 24 ಮೇ 2023, 19:30 IST
Last Updated 24 ಮೇ 2023, 19:30 IST
ಅರಸೀಕೆರೆ ಹೋಬಳಿಯ ನಂದಿಕಂಬ ತಾಂಡ ಪದವೀಧರ ರೈತ ಬಾಳ್ಯಾನಾಯ್ಕ ಚಿಯಾ ಬೆಳೆ ಕೊಯ್ಲು ಮಾಡುತ್ತಿರುವುದು.
ಅರಸೀಕೆರೆ ಹೋಬಳಿಯ ನಂದಿಕಂಬ ತಾಂಡ ಪದವೀಧರ ರೈತ ಬಾಳ್ಯಾನಾಯ್ಕ ಚಿಯಾ ಬೆಳೆ ಕೊಯ್ಲು ಮಾಡುತ್ತಿರುವುದು.   

ಅರಸೀಕೆರೆ: ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹೋಬಳಿಯ ನಂದಿಕಂಬ ತಾಂಡಾದ ಪದವೀಧರ ರೈತ ಬಾಳ್ಯಾನಾಯ್ಕ ಬಹು ಬೇಡಿಕೆ ಇರುವ ಸಿರಿಧಾನ್ಯ ಚಿಯಾ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ.

ಪ್ರಾಯೋಗಿಕ ಕೃಷಿಗೆ ಮಾದರಿಯಾಗಿರುವ ಅರಸೀಕೆರೆ ರೈತರು ಮೊದಲ ಬಾರಿಗೆ ಚಿಯಾ ಬೆಳೆದು ಗಮನ ಸೆಳೆದಿದ್ದಾರೆ.

ಚಿಲ್ಲಿ, ಸೌತೆ ಹಾಗೂ ಇತರೆ ತರಕಾರಿಗಳು ಸೇರಿದಂತೆ ವೈವಿಧ್ಯಮಯ ಬೆಳೆ ಬೆಳೆದಿದ್ದರೂ ನಿರೀಕ್ಷಿತ ಆದಾಯಗಳಿಸಲು ವಿಫಲವಾಗಿದ್ದ ರೈತ ಬಾಳ್ಯಾನಾಯ್ಕ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಚಿಯಾ ಬೆಳೆಯ ಕುರಿತು ಅರಿತಿದ್ದಾರೆ. ಅದರಲ್ಲಿ ಆಸಕ್ತಿ ತೋರಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಚಿಯಾ ಬೆಳೆ ಕುರಿತು ಮಾಹಿತಿ ಕಾರ್ಯಾಗಾರಕ್ಕೆ ಹಾಜರಾಗಿ ಮಾಹಿತಿ ಪಡೆದಿದ್ದಾರೆ. ಕಾರ್ಯಾಗಾರದಿಂದ ಆಕರ್ಷಿತರಾದ ರೈತ ಬಾಳ್ಯಾನಾಯ್ಕ ವಾಣಿಜ್ಯ ಬೇಸಾಯಕ್ಕೆ ಒಲವು ತೋರಿ, ರಾಗಿ ಬೇಸಾಯದ ಮಾದರಿಯಲ್ಲೇ ಬೆಳೆಯಬಹುದಾದ ‘ಚಿಯಾ’ ಬೇಸಾಯಕ್ಕೆ ಮುಂದಾಗಿದ್ದಾರೆ.

ರೈತ ಬಾಳ್ಯಾನಾಯ್ಕ ತನ್ನ ಎರಡು ಎಕರೆ ಪ್ರದೇಶದಲ್ಲಿ ಪ್ರತ್ಯೇಕ ಪ್ಲಾಟ್ ನಿರ್ಮಿಸಿ ಚಿಯಾ ಬೆಳೆ ಬಿತ್ತನೆ ಮಾಡಿದ್ದಾರೆ. ಉತ್ತಮವಾಗಿ ಬೆಳೆದ ಬೆಳೆಯ ಹೂಗಳ ಚಲವು ನೋಡುಗರನ್ನು ಆಕರ್ಷಿಸುತ್ತಿದೆ.

ಬಿತ್ತನೆಗೆ ಪ್ರತಿ ಎಕರೆ ₹6 ಸಾವಿರ ವೆಚ್ಚ ಬರಲಿದೆ. ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90 ರಿಂದ 100 ದಿನದಲ್ಲಿ ಫಸಲು ಪಡೆಯಬಹುದು ಎನ್ನುತ್ತಾರೆ ಎನ್ನುತ್ತಾರೆ ರೈತ ಬಾಳ್ಯಾನಾಯ್ಕ.

ಎಲ್ಲಾ ವಾತಾವರಣದಲ್ಲೂ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾ ಎಕರೆಗೆ 5 ಕ್ವಿಂಟಲ್ ಇಳುವರಿ ಸಿಗುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಕನಿಷ್ಠ ₹20,000 ದವರೆಗೆ ಮಾರಾಟವಾಗಲಿದೆ. ವಿಜಯನಗರ, ಬಳ್ಳಾರಿ, ದಾವಣಗೆರೆ ಸೇರಿದಂತೆ ಇದರ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆದರೆ ಸ್ಥಳೀಯವಾಗಿಯೇ ಖರೀದಿದಾರರು ಖರೀದಿಸಲು ಬರುತ್ತಾರೆ. ಸದ್ಯ ಮೈಸೂರು, ಎಚ್.ಡಿ ಕೋಟೆಗೆ ಬೆಳೆ ಮಾರಾಟ ಮಾಡುವುದಾಗಿ ರೈತ ಬಾಳ್ಯಾನಾಯ್ಕ ಮಾಹಿತಿ ನೀಡಿದರು.

ಅರಸೀಕೆರೆ ಹೋಬಳಿಯ ನಂದಿಕಂಬ ತಾಂಡ ಪದವೀಧರ ರೈತ ಬಾಳ್ಯಾನಾಯ್ಕ ಬೆಳೆದ ಚಿಯಾ ಬೆಳೆ ಚಲುವು
ಚಿಯಾ ಅಧಿಕೃತ ಬೆಳೆಯಾಗಿದೆ. ಅಧಿಕ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ಫಾಸ್ಫರಸ್ ಕಾರ್ಬೋಹೈಡ್ರೇಟ್ ಫೈಬರ್ ಪೌಷ್ಟಿಕಾಂಶ ಚಿಯಾ ಧಾನ್ಯದಲ್ಲಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ.
ಆರ್.ತಿಪ್ಪೇಸ್ವಾಮಿ ಉಪ ಕೃಷಿ ನಿರ್ದೇಶಕ ದಾವಣಗೆರೆ
ಚಿಯಾ ಧಾನ್ಯ ಸೇವನೆಯಿಂದ ಮೂಳೆ ಗಟ್ಟಿ ರಕ್ತದೊತ್ತಡ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವ ಕುರಿತು ವೈಜ್ಞಾನಿಕವಾಗಿ ಧೃಢಪಟ್ಟಿದೆ. ಹಾಗಾಗಿ ಕೆಲವರು ಇಲ್ಲಿಯೇ ಖರೀದಿಗೆ ಮುಂದಾಗಿದ್ದಾರೆ.
ಬಾಳ್ಯಾನಾಯ್ಕ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT