ADVERTISEMENT

ಬಳ್ಳಾರಿ| ಬಿಜೆಪಿ ಸಮಾವೇಶವೋ, ಪಾದಯಾತ್ರೆಯೋ: ಮುಂದುವರಿದ ಗೊಂದಲ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 4:23 IST
Last Updated 14 ಜನವರಿ 2026, 4:23 IST
ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)
ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ಬಳ್ಳಾರಿಯ ಘರ್ಷಣೆಯನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಸಮಾವೇಶ ಮಾಡಬೇಕೋ ಅಥವಾ ಪಾದಯಾತ್ರೆ ಮಾಡಬೇಕೋ? ಸದ್ಯ ಬಿಜೆಪಿಯ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದಲ್ಲಿ ಈ ಪ್ರಶ್ನೆ ಮನೆ ಮಾಡಿದ್ದು, ಯಾರೊಬ್ಬರ ಬಳಿಯೂ ಸ್ಪಷ್ಟ ಉತ್ತರವೇ ಇಲ್ಲವಾಗಿದೆ. 

ಪಾದಯಾತ್ರೆ ಮಾಡಲು ರಾಜ್ಯದ ನಾಯಕರೂ ಉತ್ಸುಕರಾಗಿದ್ದಾರೆ. ಜಿಲ್ಲಾ ನಾಯಕರೂ ಉತ್ಸಾಹದಲ್ಲಿದ್ದಾರೆ. ಆದರೆ, ಈ ಕುರಿತ ನಿರ್ಧಾರಕ್ಕೆ ಜಿಲ್ಲಾ ನಾಯಕರು ರಾಜ್ಯ ನಾಯಕರತ್ತ ನೋಡುತ್ತಿದ್ದರೆ, ರಾಜ್ಯ ನಾಯಕರು ಕೇಂದ್ರದ ನಾಯಕರ ಕಡೆಗೆ ನೋಡುತ್ತಿದ್ದಾರೆ ಎಂದು ಗೊತ್ತಾಗಿದೆ.  

ಹೊಸ ವರ್ಷದ ಮೊದಲ ದಿನ ಬಳ್ಳಾರಿಯ ಅವ್ವಂಬಾವಿಯ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಘರ್ಷಣೆ ಮತ್ತು ಕೊಲೆಯಂಥ ಘಟನೆಯ ನಂತರ ಬಳ್ಳಾರಿಗೆ ಬಂದಿದ್ದ ಬಿಜೆಪಿಯ ಹಲವು ಹಿರಿಯ ನಾಯಕರು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾಗಿ ಹೇಳಿದ್ದರು. 

ADVERTISEMENT

ಕಳೆದ ವಾರ ಬೆಂಗಳೂರಿನ ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯ ಚರ್ಚೆಯೂ ಆಯಿತಾದರೂ, ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ, ಜ. 17ರಂದು ಸಮಾವೇಶ ಮಾಡುತ್ತೇವೆ ಎಂದು ರಾಜ್ಯ ನಾಯಕರು ಘೋಷಣೆ ಮಾಡಿದ್ದಾರೆ. ಅಷ್ಟರ ಒಳಗಾಗಿ ಕೇಂದ್ರದಿಂದ ಅನುಮತಿ ಸಿಕ್ಕರೆ ಪಾದಯಾತ್ರೆ ಹಮ್ಮಿಕೊಳ್ಳುವ ನಿಲುವಿಗೆ ನಾಯಕರು ಬಂದಿದ್ದಾರೆ. 

ಪ್ರತಿಭಟನಾ ಸಮಾವೇಶ? ಜ. 17ರಂದು ಸಮಾವೇಶ ಮಾಡುವುದಾಗಿ ಜಿಲ್ಲಾ ಬಿಜೆಪಿಯು ಮೂರು ಜಾಗಗಳನ್ನು ಜಿಲ್ಲಾಡಳಿತಕ್ಕೆ ತೋರಿಸಿದೆ. ಎಚ್‌.ಆರ್‌ ಗವಿಯಪ್ಪ (ಮೋತಿ) ವೃತ್ತ ಅಥವಾ  ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತ ಇಲ್ಲವೇ, ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಸಮಾವೇಶ ಮಾಡುವುದಾಗಿ ಬಿಜೆಪಿಯು ತಿಳಿಸಿದೆ. ಈ ಮೂರು ಜಾಗಗಳಲ್ಲೂ ಕನಿಷ್ಠ 3 ಸಾವಿರದಿಂದ 10 ಸಾವಿರ ಜನ ಸೇರಿದರೆ ಹೆಚ್ಚೆಚ್ಚು ಎಂಬಂಥ ಸ್ಥಿತಿ ಇದೆ. ಬಹುತೇಕ ಮುನ್ಸಿಪಲ್‌ ಕಾಲೇಜು ಮೈದಾನದಲ್ಲೇ ಸಮಾವೇಶ ನಡೆಯುವ ಸಾಧ್ಯತೆಗಳಿವೆ.  

ಇನ್ನೊಂದೆಡೆ ಸಮಾವೇಶಕ್ಕೆ ನಿಗದಿ ಮಾಡಿರುವ ದಿನ ಹೆಚ್ಚು ದೂರವೇನಿಲ್ಲ. ಅಷ್ಟರ ಒಳಗಾಗಿ ಬೃಹತ್‌ ಸಮಾವೇಶಕ್ಕೆ ಬೇಕಾದ ವ್ಯವಸ್ಥೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಬಿಜೆಪಿಯ ಜಿಲ್ಲಾ ಕಾರ್ಯಕರ್ತರಲ್ಲೇ ಮನೆ ಮಾಡಿದೆ. 

ರವಿಕುಮಾರ್‌ ಸಭೆ: ಜ. 17ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶದ ರೂಪುರೇಷೆ ಚರ್ಚೆ ಮಾಡಲು ವಿಧಾನ ಪರಿಷತ್‌ ಬಿಜೆಪಿಯ ಸಚೇತಕ ರವಿಕುಮಾರ್‌ ಮಂಗಳವಾರ ಬಳ್ಳಾರಿಗೆ ಬಂದಿದ್ದರು. ಸ್ಥಳೀಯ ನಾಯಕರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ಅವರು ಬಳ್ಳಾರಿ, ವಿಜಯನಗರದ ಪ್ರತಿ ಬೂತ್‌ಗಳಿಂದ ಜನರನ್ನು ಸಮಾವೇಶಕ್ಕೆ ಕರೆತರಬೇಕಾಗಿ ತಿಳಿಸಿದ್ದಾರೆ ಎನ್ನಲಾಗಿದೆ. 

ಪಾದಯಾತ್ರೆಯೇ ಆಗಬೇಕು: ಪಾದಯಾತ್ರೆ ಮಾಡಿದರೆ ಪಕ್ಷಕ್ಕೆ ಚೇತರಿಕೆ ಸಿಗುತ್ತದೆ. ಇಂಥ ಅವಕಾಶ ಮತ್ತೆ ಸಿಗುವುದೂ ಅನುಮಾನವಿದೆ. ಇಷ್ಟಿದ್ದರೂ ಪಾದಯಾತ್ರೆಗೆ ಕೇಂದ್ರದ ಕಡೆಗೆ ನೋಡಬೇಕಾದ್ದು ಏಕೆ ಎಂಬುದು ಪಕ್ಷದ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ. 

ಪಾದಯಾತ್ರೆ ಮಾಡುವುದರಿಂದ ಪಕ್ಷಕ್ಕಿಂತಲೂ ಹೆಚ್ಚಾಗಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಹೆಚ್ಚಿನ ಪ್ರಚಾರ ಸಿಗುವ ಆತಂಕ ಕೇಂದ್ರ ಮತ್ತು ರಾಜ್ಯ ನಾಯಕರಲ್ಲಿದೆ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.