
ಕಂಪ್ಲಿ: ‘ಎಲ್ಲರನ್ನೂ ಪ್ರೀತಿಸು, ಸರ್ವರಿಗೂ ಒಳಿತನ್ನೇ ಬಯಸು, ಶತ್ರುಗಳನ್ನು ಕ್ಷಮಿಸು ಎನ್ನುವ ಅಪೂರ್ವ ಜೀವನ ಸಂದೇಶವನ್ನು ಯೇಸುಕ್ರಿಸ್ತರು ಜಗತ್ತಿಗೆ ಸಾರಿದ್ದು, ಇವು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ’ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
ಕ್ರಿಸ್‌ಮಸ್ ಅಂಗವಾಗಿ ಇಲ್ಲಿನ ಸೋಮಪ್ಪ ಕೆರೆ ಬಳಿಯ ಎಲ್- ಷೆಡ್ಡಾಯ್ ಚರ್ಚ್‌ನಲ್ಲಿ ಗುರುವಾರ ಯೇಸುಕ್ರಿಸ್ತ್‌ರ ಜನ್ಮದಿನ ಆಚರಣೆಗೆ ಚಾಲನೆ ನೀಡಿ, ‘ಭಾರತ ಸರ್ವಧರ್ಮಗಳ ನೆಲೆಯಾಗಿದೆ’ ಎಂದರು.
ಎಲ್-ಷೆಡ್ಡಾಯ್ ಚರ್ಚ್ ಫಾಸ್ಟರ್ ಪಾಲ್ ಪಂಪಾಪತಿ ಮಾತನಾಡಿ, ‘ಸರ್ವರನ್ನು ಪ್ರೀತಿಸುವ ಯೇಸು ಮಹಾರಾಜರ ತತ್ವ, ಆದರ್ಶಗಳು ಎಂದಿಗೂ ಪ್ರಸ್ತುತ’ ಎಂದರು.
ಆರ್ಥಿಕವಾಗಿ ಹಿಂದುಳಿದವರಿಗೆ ವಸ್ತ್ರ, ಮಕ್ಕಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಯೇಸುಕ್ರಿಸ್ತರ ಕುರಿತು ಭಕ್ತಿ ಗೀತೆಗಳ ಗಾಯನ ನಡೆಯಿತು.
ಪ್ರಮುಖರಾದ ಕೆ. ಶ್ರೀನಿವಾಸರಾವ್, ಹೊಸಕೋಟೆ ಜಗದೀಶ, ಸಿ.ಆರ್. ಹನುಮಂತ, ಎಂ. ಉಸ್ಮಾನ್, ಕೆ. ಷಣ್ಮುಖಪ್ಪ, ಆರ್.ಪಿ. ಶಶಿಕುಮಾರ್, ಮಲ್ಲೇಶಪ್ಪ, ಕೆ. ಮೆಹಬೂಬ್, ಆಟೊ ವಿರುಪಾಕ್ಷಿ, ಮೆಟ್ರಿ ನಾಗರಾಜ, ಸೋಮಪ್ಪ, ಗಣೇಶ, ಹುಲುಗಪ್ಪ, ಮೌಲಪ್ಪ ಇದ್ದರು.
ಸಹಾಯಮಾತೆ ದೇವಾಲಯ: ಕಂಪ್ಲಿ ಸಕ್ಕರೆ ಕಾರ್ಖಾನೆ ಸಹಾಯ ಮಾತೆ ದೇವಾಲಯದಲ್ಲಿ ಬಾಲ ಯೇಸುವಿನ ಜನನ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಫಾದರ್ ಸುನೀಲ್ ಮಾತನಾಡಿದರು. ಸಿಸ್ಟರ್ ಬೆನ್ನಿ ಸೇರಿದಂತೆ ಕ್ರೈಸ್ತ ಸಮುದಾಯದವರು ಹಾಜರಿದ್ದರು.
ಏಸುವಿನ ಜನನ ವೃತ್ತಾಂತ ಬಿಂಬಿಸುವ ಗೋದಲಿ ಗಮನ ಸೆಳೆಯಿತು.
ಸಂಡೂರು: ಪಟ್ಟಣದ ಕ್ರಿಸ್ತ ಜ್ಯೋತಿ ಚರ್ಚ್‌ನಲ್ಲಿ ಯೇಸು ಕ್ರಿಸ್ತನ ಜನ್ಮದಿನವನ್ನು ಪಟ್ಟಣ ವಿವಿಧ ಗ್ರಾಮಗಳ ಕ್ರೈಸ್ತ ಅನುಯಾಯಿಗಳು ಗುರುವಾರ ಸಂಭ್ರಮದಿಂದ ಆಚರಿಸಿದರು. ಪಟ್ಟಣ ಸೇರಿದಂತೆ ತಾಲ್ಲೂಕಿನ ದೋಣಿಮಲೈ ರಾಮಗಡ ಸುಬ್ಬರಾಯನಹಳ್ಳಿ ದೇವಗಿರಿ ಇತರೆ ಗ್ರಾಮಗಳ ಕ್ರೈಸ್ತರು ಚರ್ಚ್ ನ ಧರ್ಮಗುರು ಆಲ್ಬರ್ಟ್ ಡಿಸಿಲ್ವಾ ಅವರು ಚರ್ಚಿನ ಆವರಣದಲ್ಲಿರುವ ಗೋದಲಿಯಲ್ಲಿನ ಬಾಲ ಯೇಸುವಿನ ಮೂರ್ತಿಯ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕ್ರೈಸ್ತರು ಕುಟುಂಬ ಸಮೇತವಾಗಿ ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳ ಆಶೀರ್ವಚನ ಆಲಿಸಿದರು. ಯೇಸುವನ್ನು ಕೊಂಡಾಡುವ ದೇವಸ್ತುತಿ ಗೀತೆಗಳನ್ನು ಹಾಡಿ ಭಕ್ತಿ ಮೆರೆದರು. ಸಂಡೂರಿನ ಕೃಪಾನಿಲಯದ ಶಾಲೆಯ ಕ್ರೈಸ್ತರಾದ ಸಿಸ್ಟರ್ ಪೌಲಿನ್ ರಜಿನಾ ಸಿಸಿಲಿಯ ಫಿಲಿಕ್ಸ್ ಲೂಸಿ ದೀಪ್ತಿ ಥಾಮಸ್ ವಿವಿಧ ಗ್ರಾಮಗಳ ಕ್ರೈಸ್ತರು ಇದ್ದರು.
ತೆಕ್ಕಲಕೋಟೆ: ‘ಲೋಕರಕ್ಷಕ ಯೇಸುಕ್ರಿಸ್ತ ಮಾನವ ಕಲ್ಯಾಣಕ್ಕಾಗಿ ಜನಿಸಿದ್ದು ಎಲ್ಲರನ್ನು ಆದರಿಸಿ ಪ್ರೀತಿಸಿ ಹಾಗೂ ಸೇವೆ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಿ’ ಎಂದು ಫಾಸ್ಟರ್ ಮೆರ್ಸಿ ಜ್ಞಾನರಾಜ್ ಸಂದೇಶ ನೀಡಿದರು. ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿಯ ಮಾರನಾಥ ಎಜಿ ಚರ್ಚಿನಲ್ಲಿ ಗುರುವಾರ ನಡೆದ ಕ್ರಿಸ್ ಮಸ್ ಆಚರಣೆಯಲ್ಲಿ ಧರ್ಮಸಂದೇಶ ನೀಡಿದರು. ಹಬ್ಬದ ದಿನ ಕ್ರೈಸ್ತ ಧರ್ಮಿಯರು ತಮ್ಮ ಮನೆಗಳಲ್ಲಿ ಗೋದಲಿ ನಿರ್ಮಿಸಿ ಬಾಲಯೇಸು ಮೇರಿ ಜೋಸೆಫ್ ಹಾಗೂ ಕುರಿ ಗೊಂಬೆಗಳ ಇಟ್ಟು ಅಲಂಕಾರ ಮಾಡಿದ್ದರು. ಮಕ್ಕಳು ಸಾಂತಾಕ್ಲಾಸ್ ಸುತ್ತ ಸುತ್ತಾಡಿ ಸಂಭ್ರಮಿಸಿದರು. ಕ್ರೈಸ್ತರು ಕೆಲ ಪ್ರದೇಶಗಳಲ್ಲಿ ಕ್ಯಾಂಡಲ್ ಹಿಡಿದು ದೇವರ ಸ್ತೋತ್ರ ಹಾಡಿದರು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕುರುಗೋಡು: ‘ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ಯೇಸುವಿನ ಆದರ್ಶವನ್ನು ಎಲ್ಲರೂ ಪಾಲಿಸಬೇಕು’ ಎಂದು ಫಾದರ್ ವಾಲ್ಟರ್ ಮತ್ತು ಫಾದರ್ ಜಯಪ್ರಕಾಶ್ ಸಲಹೆ ನೀಡಿದರು. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಇಲ್ಲಿನ ಬಾದನಹಟ್ಟಿ ರಸ್ತೆಯಲ್ಲಿರುವ ಚರ್ಚ್‍ನಲ್ಲಿ ಗುರುವಾರ ಶಾಂತಿಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾರಂಭದಲ್ಲಿ ಚರ್ಚ್‍ನಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಜರುಗಿತು. ನಂತರ ಪರಸ್ಪರ ಹಬ್ಬದ ಶುಭಾಯಶ ವಿನಿಮಯ ಮಾಡಿಕೊಂಡರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಬಹುತೇಕ ಚರ್ಚ್‍ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.