ADVERTISEMENT

ಬಳ್ಳಾರಿ: ಯಾರ ಹಿಡಿತದಲ್ಲಿದೆ ಪಾಲಿಕೆ ?

ಪಾಲಿಕೆ ಬಿಜೆಪಿ ಸದಸ್ಯರ ಆರೋಪ ; ಅಧಿಕಾರ ಪಡೆದು ಜನರಿಗೆ ಕಾಂಗ್ರೆಸ್‌ ಮೋಸ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 5:43 IST
Last Updated 20 ಜುಲೈ 2025, 5:43 IST
ಇಬ್ರಾಹಿಂ ಬಾಬು 
ಇಬ್ರಾಹಿಂ ಬಾಬು    

ಬಳ್ಳಾರಿ: ‘ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಪಕ್ಷವು ಮೇಯರ್‌ ಚುನಾವಣೆ ವೇಳೆ ಸದಾ ಗೊಂದಲ ಸೃಷ್ಟಿ ಮಾಡುತ್ತಿದ್ದು, ಜನರ ಹಿತ ಮರೆತಿದೆ. ಪಾಲಿಕೆ ಯಾರ ಹಿಡಿತದಲ್ಲಿದೆ? ಮೇಯರ್‌ ಚುನಾವಣೆ ಯಾವಾಗ?’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಸಿರಿವೇಲು ಇಬ್ರಾಹಿಂ (ಬಾಬು) ಪ್ರಶ್ನೆ ಮಾಡಿದ್ದಾರೆ. 

ಶನಿವಾರ ನಡೆದ ಪಾಲಿಕೆ ಬಿಜೆಪಿ ಸದಸ್ಯರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಳ್ಳಾರಿ ಪಾಲಿಕೆ ರಚನೆಯಾದ ಆರಂಭಿಕ ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಮೇಯರ್‌, ಉಪ ಮೇಯರ್‌, ಸ್ಥಾಯಿ ಸಮತಿ ಚುನಾವಣೆಗೆ ನಾವು ಆಗ ಗಲಾಟೆ ಮಾಡಿಕೊಂಡಿರಲಿಲ್ಲ. 2013ರ ಬಳಿಕ ಎರಡು ಬಾರಿ ಪಾಲಿಕೆ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಅಂದಿನಿಂದ ಇಲ್ಲಿಯ ವರೆಗೆ ಮೇಯರ್, ಉಪ ಮೇಯರ್ ಚುನಾವಣೆ ಸಮಯದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ. ಇದಕ್ಕೆಲ್ಲ ಕಾರಣ ಯಾರು? ಪಾಲಿಕೆಯು ಯಾರ ಹಿಡಿತದಲ್ಲಿದೆ?’ ಎಂದು ಅವರು ಪ್ರಶ್ನಿಸಿದರು. 

‘ಮೇಯರ್‌ ಸ್ಥಾನದ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್‌ನವರೇ ನ್ಯಾಯಾಲಯಕ್ಕೆ ಹೋಗಿದ್ದಾರೆ. ಮೀಸಲಾತಿಯನ್ನು ಒಮ್ಮೆ ಅವರೇ ಬದಲಿಸಿ, ಈಗ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ಸಿಗಬೇಕು ಎಂದು ಅವರೇ ನ್ಯಾಯಾಲಯಕ್ಕೆ ಹೋದರೆ ಅದರಲ್ಲಿ ಅರ್ಥವಿದೆಯೇ. ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಮುಸ್ಲಿಮರು, ಕುರುಬರು ಸೇರಿದಂತೆ ಹಿಂದುಳಿದವರಿಗೆ ಅನ್ಯಾಯ ಮಾಡಲಾಗಿದೆ’ ಎಂದು ಬಾಬು ಆರೋಪಿಸಿದರು. 

ADVERTISEMENT

‘‍‍ಪಾಲಿಕೆ ಈಗ ಯಾರ ಕೈಯಲ್ಲಿದೆ, ನಗರದ ಸಮಸ್ಯೆಗಳನ್ನು‌ನೋಡುವವರು ಯಾರು, ಈಗಿನ ಮೇಯರ್‌ಗೆ ಸಪೂರ್ಣ ಅಧಿಕಾರವಿಲ್ಲ. ಅವರು ಉತ್ಸವ ಮೂರ್ತಿ ಮಾತ್ರ. ರಾಜ್ಯದಲ್ಲಿ ಕಾಂಗ್ರೆಸ್‌ನದ್ದೇ  ಸರ್ಕಾರವಿದೆ. ಮನಸ್ಸು ಮಾಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ಜನರ ಕಾಳಜಿ ಇಲ್ಲದ ಸರ್ಕಾರ ಇಂಥ ಗೊಂದಲ ಸೃಷ್ಟಿಸುತ್ತಿದೆ. ಪಾಲಿಕೆಯಲ್ಲಿ ಎರಡು ಬಾರಿ ಆಯ್ಕೆ ಮಾಡಿದರೂ ಕಾಂಗ್ರೆಸ್‌ನಿಂದ ಜನರಿಗೆ ವಂಚನೆಯಾಗಿದೆ’ ಎಂದರು. 

‘ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ನಗರದ 80 ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿತ್ತು. ಈಗ ಅದನ್ನೇ ಮುಂದುವರಿಸಲಾಗುತ್ತಿದೆ. ಗಡಿಗಿ ಚೆನ್ನಪ್ಪ ವೃತ್ತದ ನಿರ್ಮಾಣ ಸೇರಿದಂತೆ ನಗರದ ಬಹುತೇಕ ಕಾಮಗಾರಿಗಳಿಗೆ ಬಳಕೆಯಾಗುತ್ತಿರುವುದು ನಮ್ಮ ಸರ್ಕಾರದ್ದೇ ಅನುದಾನ’ ಎಂದು ಪಾಲಿಕೆ ಸದಸ್ಯ ಶ್ರೀನಿವಾಸ್‌ ಹೇಳಿದರು.  

‘ನಗರದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಕಾಡುತ್ತಿದೆ. ನೀರು ಸರಿಯಾಗಿ ಬರುತ್ತಿಲ್ಲ. ಬಿಜೆಪಿ ಸದಸ್ಯರಿಗೆ ಅನುದಾನ ಕೊಡುತ್ತಿಲ್ಲ. ನಮ್ಮ ಕ್ಲಿನಿಕ್‌ಗಳು ಉದ್ಘಾಟನೆ ಕಾಣುತ್ತಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ ನಗರ ಶಾಸಕರು ಸಮಯ ಕೊಡುತ್ತಿಲ್ಲ ಎನ್ನುತ್ತಾರೆ’ ಎಂದು ಪಾಲಿಕೆ ವಿರೋಧ ಪಕ್ಷದ ಸದಸ್ಯರು ಇದೇ ವೇಳೆ ಆರೋಪಿಸಿದರು. 

ಪಾಲಿಕೆ ಸದಸ್ಯರಾದ ಎಂ.ಗೋವಿಂದರಾಜುಲು, ಕೆ.ಎಸ್.ಅಶೋಕ್, ಶ್ರೀನಿವಾಸ ಮೊತ್ಕರ್, ಗುಡಿಗಂಟಿ ಹನುಮಂತ, ಸುರೇಖಾ ಮಲ್ಲನಗೌಡ, ಕೆ.ಹನುಮಂತಪ್ಪ, ಈರಮ್ಮ ಸುರೇಂದ್ರ, ಕಲ್ಪನಾ ವೆಂಕಟೇಶ, ಮುಖಂಡರಾದ ವೇಮಣ್ಣ, ಮಲ್ಲನಗೌಡ, ಊಳೂರು ಸಿದ್ದೇಶ್, ಸೂರಿ ಇದ್ದರು. 

ಮೇಯರ್ ಚುನಾವಣೆ ಯಾವಾಗ ನಡೆಯಲಿದೆ? ಮುಸ್ಲಿಮರಿಗೆ ಅವಕಾಶ ಸಿಗುವುದೋ ಇಲ್ಲವೋ? ನಗರದ ಸಮಸ್ಯೆಗಳನ್ನು ಯಾರು ಗಮನಿಸಬೇಕು? ಇದಕ್ಕೆಲ್ಲ ಕಾಂಗ್ರೆಸ್‌ ಉತ್ತರ ನೀಡಬೇಕು
ಸಿರಿವೇಲು ಇಬ್ರಾಹಿಂ ಪಾಲಿಕೆ ವಿರೋಧ ಪಕ್ಷದ ನಾಯಕ 

ಗಾಂಜಾ ಡ್ರಗ್ಸ್‌ ಹಾವಳಿ:

ನಗರದಲ್ಲಿ ಗಾಂಜಾ ಡ್ರಗ್ಸ್‌ ಹಾವಳಿ ಹೆಚ್ಚಾಗಿದೆ. ನಗರದ ಓಣಿ ಓಣಿಗಳಲ್ಲಿ ಯುವಕರು ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿದ್ದಾರೆ. ಆದರೆ ಇದನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಪೊಲೀಸರೂ ಗಮನಿಸುತ್ತಿಲ್ಲ. ಮಟಕಾ ಇಸ್ಪೀಟ್‌ ದಂಧೆಯಿಂದ ಜನ ಜಮೀನು ಮಾರಿಕೊಳ್ಳುತ್ತಿದ್ಧಾರೆ. ಕ್ಲಬ್‌ಗಳು ರಾಜಾರೋಷವಾಗಿ ನಡೆಯುತ್ತಿದೆ ಎಂದು ಪಾಲಿಕೆ ಬಿಜೆಪಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.