
ಬಳ್ಳಾರಿ: ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ನಡೆಸಲು ಉದ್ದೇಶಿಸಿರುವ ದೇವದಾರಿ ಗಣಿಯನ್ನು ‘ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿ’ ತೀವ್ರವಾಗಿ ಆಕ್ಷೇಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟಗಾರ, ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ, ‘ಸಂಡೂರು ದೇಶದಲ್ಲೇ ವಿಶಿಷ್ಟವಾದ ಪ್ರದೇಶ. ಇಲ್ಲಿನ ಅರಣ್ಯ ನಾಶ ಮಾಡಿ ವಾರ್ಷಿಕವಾಗಿ 50 ಮಿಲಿಯನ್ ಟನ್ ಅದಿರು ಉತ್ಪಾದನೆ ಮಾಡಲಾಗುತ್ತಿದೆ. ಇದು ಹೀಗೆ ಹೋದರೆ ಕಾಡು, ಅದಿರು ಎರಡೂ ಖಾಲಿ ಆಗಲಿದೆ. ಸಂಡೂರು ಸ್ಮಶಾನವಾಗಲಿದೆ. ಮಳೆ ಕಡಿಮೆಯಾಗಲಿದೆ. ಕುಮಾರಸ್ವಾಮಿ ಗುಡ್ಡದಲ್ಲಿನ ಪವಿತ್ರ ಝರಿ, ಜಲಪಾತಗಳು ಕಣ್ಮರೆಯಾಗಲಿವೆ. ಆದ್ದರಿಂದಲೇ ಅದಿರು ಉತ್ಪಾದನೆಯನ್ನು 20 ಮಿಲಿಯನ್ ಟನ್‌ಗೆ ಇಳಿಸಲು ಕೇಂದ್ರದ ಉನ್ನತಾಧಿಕಾರ ಸಮಿತಿಯ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇತಿಮಿತಿಯಲ್ಲಿ ಗಣಿಗಾರಿಕೆ ನಡೆಯಬೇಕು’ ಎಂದರು.
‘ಈ ಮಧ್ಯೆ, ಕೆಐಒಸಿಎಲ್ ಗಣಿಗಾರಿಕೆ ನಡೆಸಲು ಮುಂದಾಗಿದೆ. ಕಂಪನಿಗೆ ನಮ್ಮ ವಿರೋಧವಿಲ್ಲ. ಆದರೆ, ಕಾಡು ನಾಶ ಮಾಡುವ ಕಂಪನಿಯ ಯೋಜನೆಗೆ ನಮ್ಮ ವಿರೋಧವಿದೆ. ರಾಜ್ಯದ ಮಣ್ಣಿನ ಮಗ ಎನಿಸಿಕೊಂಡ ಎಚ್.ಡಿ ಕುಮಾರಸ್ವಾಮಿ ಅವರೇ ಕಾಡು ನಾಶಕ್ಕೆ ಅನುಮತಿ ನೀಡಿದ್ದಾರೆ. ದೇವದಾರಿ ಗಣಿ ಬೇಡ ಎಂಬುದು ಜನರ ಬೇಡಿಕೆ. ಅವರ ಪರವಾಗಿ ನಾವಿದ್ದೇವೆ. ಸಂಡೂರಿನಲ್ಲಿ ಗಣಿಗಾರಿಕೆಯಿಂದ ಲಾರಿ ಚಾಲನೆ ವೃತ್ತಿ ಬಿಟ್ಟರೆ ಬೇರೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಗಣಿ ಕಂಪನಿಗಳಲ್ಲಿ ಕೆಲಸ ಸಿಗುತ್ತಿಲ್ಲ’ ಎಂದು ಹೇಳಿದರು.
‘ಕೆಐಒಸಿಎಲ್ ಗಣಿಗಾರಿಕೆಗೆ ಹೊಸದಾಗಿ ಅರಣ್ಯ ಭೂಮಿ ನೀಡುವ ಬದಲಿಗೆ, ಆ ಕಂಪನಿಗೆ ಎನ್‌ಎಂಡಿಸಿಯಿಂದ ಅದಿರು ಒದಗಿಸಲಿ. ಇದಕ್ಕೆ ಅವಕಾಶವಿದೆ. ಸಂಡೂರು, ಬಳ್ಳಾರಿಯ ಜನಪ್ರತಿನಿಧಿಗಳು ಈ ಹೋರಾಟ ಬೆಂಬಲಿಸಬೇಕು. ಇಲ್ಲವಾದರೆ, ಅವರ ವಿರುದ್ಧವೂ ಹೋರಾಟ ನಡೆಸಲಾಗುವುದು’ ಎಂದರು.
ವಕೀಲ ಟಿ.ಎಂ ಶಿವಕುಮಾರ್ ಮಾತನಾಡಿ, ‘ಸಂಡೂರಿನಲ್ಲಿ ಗಣಿಗಳಿಂದ ಪರಿಸರ ಹಾಳಾಗಿ ಹೋಗಿದೆ. ಈಗಾಗಲೇ ಗಣಿಗಾರಿಕೆ ನಡೆಸಿ ಖಾಲಿ ಬಿಟ್ಟಿರುವ ‘ಬ್ರೋಕನ್ ಮೈನ್ಸ್’ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕೆಐಒಸಿಎಲ್‌ಗೆ ಅಗತ್ಯವಿದ್ದರೆ ಈ ‘ಬ್ರೋಕನ್ ಮೈನ್ಸ್’ಗಳನ್ನು ನೀಡಲಿ. ಆದರೆ, ಕುದುರೆಮುಖದಲ್ಲಿ ಕಂಪನಿ ಮಾಡಿದ ಪರಿಸರ ಹಾನಿಯನ್ನು ಇಲ್ಲಿಯೂ ಮಾಡಲು ಬಿಡುವುದಿಲ್ಲ’ ಎಂದರು.
‘ದೇವದಾರಿ ಗಣಿ ಅರಣ್ಯ ಹಕ್ಕು ಸಮಿತಿಯ ಅನುಮತಿ ಪಡೆಯಬೇಕಿತ್ತು. ಆದರೆ ಇದನ್ನು ಮೀರಿ ಪ್ರಮಾಣ ಪತ್ರ ನೀಡಲಾಗಿದೆ. ಇದರ ತನಿಖೆ ಆಗಬೇಕು. ಗಣಿ ಚಟುವಟಿಕೆ ವಿರುದ್ಧ ಮಂಗಳವಾರ ನರಸಿಂಗಾಪುರ ಗ್ರಾಮದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಲಿದೆ’ ಎಂದು ಅವರು ಹೇಳಿದರು.
ಹೋರಾಟಗಾರ್ತಿ ಡಿ. ನಾಗಲಕ್ಷ್ಮೀ, ರೈತ ಹೋರಾಟಗಾರ ಎಂ.ಎಲ್.ಕೆ ನಾಯ್ಡು, ಕೆಆರ್‌ಎಸ್ ಪಕ್ಷದ ಶ್ರೀನಿವಾಸ ರೆಡ್ಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.