
ಬಳ್ಳಾರಿ: ‘ಮಹಾನಗರ ಪಾಲಿಕೆ, ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಳಿದಿರುವ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಫಲಾನುಭವಿಗಳಿಗೆ ಸವತ್ತು, ಹಣ ಬಿಡುಗಡೆ ಮಾಡಬೇಕು. ತೆರಿಗೆ ಸಂಗ್ರಹ ಸೂಕ್ತ ರೀತಿಯಲ್ಲಿ ನಡೆಬೇಕು, ಅಗತ್ಯವಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಬೇಕು’ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಿದ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಅವರು ನಡೆಸಿದರು.
ಸಭೆಗೆ ಪಾಲಿಕೆ ಸಿದ್ಧಪಡಿಸಿಕೊಂಡು ಬಂದಿದ್ದ ವರದಿ ಇಂಗ್ಲಿಷ್‌ನಲ್ಲಿ ಇದ್ದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಸುರೇಶ್ ಸಭೆ ಆರಂಭಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ 130ಕ್ಕೂ ಹೆಚ್ಚು ಕಾಮಗಾರಿಗಳಿಗೆ ಕಾರ್ಯಾದೇಶ ನೀಡದೇ ಇರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. 10 ದಿನದಲ್ಲಿ ಕಾರ್ಯಾದೇಶ ನೀಡಲು ಸೂಚಿಸಿದರು. ಸೂಪರಿಂಟೆಂಡೆಂಟ್ ಎಂಜಿನಿಯರ್ ಸೇರಿದಂತೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ತಾಕೀತು ಮಾಡಿದರು.
ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪದೇ ಇರುವುದಕ್ಕೂ ಅವರು ಆಕ್ಷೇಪಿಸಿದರು. ಸ್ಥಳೀಯ ಶಾಸಕರು ಇದನ್ನು ಗಮನಿಸಬೇಕು ಪಾಲಿಕೆ ಆಯುಕ್ತ ಮಂಜುನಾಥ್‌ಗೆ ಸಲಹೆ ನೀಡಿದರು. ಡಿಸೆಂಬರ್ ಹೊತ್ತಿಗೆ ವಿವಿಧ ಯೋಜನೆಗಳ ಫಲಾನುಭವಿಳಿಗೆ ಸವಲತ್ತು ವಿತರಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದರು.
ಬೋರ್‌ವೆಲ್ ಕೊರೆಯಲು ಪಾಲಿಕೆಯಲ್ಲಿ ₹35 ಲಕ್ಷ ಹಣ ಇರುವುದನ್ನು ಕಂಡು ಸಚಿವ ಸುರೇಶ್ ಆಶ್ಚರ್ಯ ವ್ಯಕ್ತಪಡಿಸಿದರು. ಕೂಡಲೇ ಅಗತ್ಯವಿರುವ ಕಡೆ ಕೊಳೆವೆ ಬಾರಿ ಕೊರೆಯಿರಿ ಎಂದು ಮಂಜುನಾಥ್‌ಗೆ ತಾಕೀತು ಮಾಡಿದರು.
ಉದ್ಯಾನವನ, ಕೆರೆಗಳ ಅಭಿವೃದ್ಧಿಗೆ ಪಾಲಿಕೆ ಬಳಿ ₹25 ಕೋಟಿ ಇದ್ದರೂ, ಖರ್ಚು ಮಾಡದೇ ಉಳಿಸಿಕೊಂಡಿರುವುದನ್ನು ಕಂಡು ಸಚಿವ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ನಡೆಯುತ್ತಿರುವ ಇ–ಖಾತೆ ಅಭಿಯಾನ ಬಳ್ಳಾರಿಯಲ್ಲಿ ಯಾವ ರೀತಿ ನಡೆಯುತ್ತಿದೆ, ಹಿಂದೆ ತೆರಿಗೆ ಎಷ್ಟು ಸಂಗ್ರಹವಾಗುತ್ತಿತ್ತು, ಈಗ ಗುರಿ ಎಷ್ಟಿದೆ ಎಂಬುದರ ಮಾಹಿತಿಯೇ ಇಲ್ಲದೇ ಸಭೆಗೆ ಬಂದಿದ್ದ ಅಧಿಕಾರಿಗಳನ್ನು ಸಚಿವರು ಟೀಕಿಸಿದರು.
ವಾಣಿಜ್ಯ ಲೈಸೆನ್ಸ್‌ಗಳನ್ನು ಹೆಚ್ಚಿಸುವಂತೆಯೂ, ಹೆಚ್ಚು ತೆರಿಗೆ ಸಂಗ್ರಹಿಸುವಂತೆಯೂ, ಒತ್ತುವರಿ ಆಗಿರುವ ಪಾಲಿಕೆ ಜಾಗಗಳನ್ನು ಯಾವುದೇ ಮುಲಾಜಿಲ್ಲದೇ ಮರು ವಶಕ್ಕೆ ಪಡೆಯುವುಂತೆಯೂ, ನ್ಯಾಯಾಲಯದಲ್ಲಿ ಪಾಲಿಕೆ ಪರ ಸಮರ್ಥ ವಾದ ಮಂಡಿಸಲು ಸಮರ್ಥ ಕಾನೂನು ತಜ್ಞರನ್ನು ನೇಮಿಸಿಕೊಳ್ಳುವಂತೆಯೂ, ಬೀದಿ ನಾಯಿಗಳನ್ನು, ಬೀಡಾಡಿ ದನಗಳನ್ನು ಹಿಡಿದು ನಗರದ ಹೊರಗೆ ಬಿಡುವಂತೆಯೂ, ಪಾಲಿಕೆ ಆಯುಕ್ತರು, ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ನೀಡುವ ಮೊದಲು ಸ್ಥಳೀಯ ಕಾರ್ಪೊರೇಟರ್‌ಗೆ ಮಾಹಿತಿ ನೀಡುವಂತೆಯೂ, ಕಾರ್ಪರೇಟರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ಜಾರಿ ಮಾಡುವಂತೆಯೂ, ಇಂದಿರಾ ಕ್ಯಾಂಟೀನ್‌ಗಳನ್ನು ಯಾವುದೇ ಕಾರಣಕ್ಕೂ ಮುಚ್ಚದೇ ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆಯೂ ಅವರು ಸಲಹೆ ನೀಡಿದರು.
ಸಿಬ್ಬಂದಿ ಒದಗಿಸುವ ಭರವಸೆ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 316 ಮಂಜೂರಾದ ಹುದ್ದೆಗಳಿದ್ದು 93 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಸಿಬ್ಬಂದಿ ಒದಗಿಸುವುದಾಗಿ ಸಚಿವ ಸುರೇಶ್ ಭರವಸೆ ನೀಡಿದರು.
ಪಾಲಿಕೆಗೆ 1100 ಪೌರಕಾರ್ಮಿಕರನ್ನು ಮಂಜೂರು ಮಾಡಬೇಕಾಗಿ ಶಾಸಕ ನಾಗೇಂದ್ರ ಮನವಿ ಮಾಡಿದರು.
ಪ್ರತಿ ತಿಂಗಳ 7ನೇ ತಾರೀಕಿನ ಒಳಗೆ ಪೌರಕಾರ್ಮಿಕರಿಗೆ ವೇತನ ನೀಡಬೇಕು ಎಂದು ಸಚಿವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ನಗರಕ್ಕೆ ಕಸ ಗುಡಿಸುವ ಯಂತ್ರಗಳ ಅಗತ್ಯವಿರುವ ಕುರಿತು ಚರ್ಚೆ ನಡೆದವು. ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಸಿಎಸ್‌ಆರ್ ಅನುದಾನದಲ್ಲಿ 5 ಯಂತ್ರಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ತುಕಾರಾಂ ಹೋಂ ವರ್ಕ್ ಪಾಠ: ಸಭೆಗೆ ಮಾಹಿತಿಯೇ ಇಲ್ಲದೇ ಬಂದಿದ್ದ ಅಧಿಕಾರಿಗಳಿಗೆ ಸಂಸದ ತುಕಾರಾಂ ‘ಹೋಂವರ್ಕ್’ ಪಾಠ ಹೇಳಿಕೊಟ್ಟರು. ಸಭೆಗೆ ಮುನ್ನ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿರಬೇಕು. ಏನು ಪ್ರಶ್ನೆ ಎದುರಾಗಬಹುದು ಎಂಬುದನ್ನು ಅಂದಾಜಿಸಿ ವರದಿ ಸಿದ್ಧಪಡಿಸಿಕೊಳ್ಳಬೇಕು. ಹಿಂದಿನ ದಿನ ಹೋಂವರ್ಕ್ ಮಾಡಿಕೊಂಡು ಬರಬೇಕು ಎಂದು ಸಲಹೆ ನೀಡಿದರು. ಸಿದ್ಧತೆ ಇಲ್ಲದೇ ಬಂದರೆ ಟೀಕೆ ಖಚಿತ ಎಂದು ಎಚ್ಚರಿಸಿದರು.
ಕಾರ್ಪೊರೇಟರ್‌ಗಳಿಗೆ ಯಾಕೆ ಸಂಬಳ?: ಕಾರ್ಪೊರೇಟರ್‌ಗಳಿಗೆ ವೇತನ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಜಿ ಮೇಯರ್ ಮುಲ್ಲಂಗಿ ನಂದೀಶ್ ಸಚಿವ ಬೈರತಿ ಸುರೇಶ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್, ಕಾರ್ಪೊರೇಟರ್‌ಗಳಿಗೆ ಯಾಕೆ ಸಂಬಳ ಎಂದು ಪ್ರಶ್ನಿಸಿದರು. ಇದಕ್ಕೆ ಧನಿಗೂಡಿಸಿದ ಶಾಸಕ ಬಿ.ನಾಗೇಂದ್ರ ಕಾರ್ಪೊರೇಟರ್‌ಗಳು ಶಾಸಕರಿಗಿಂತಲೂ ಶ್ರೀಮಂತರು ಎಂದರು.
ಸಭೆಯಲ್ಲಿ ಮೇಯರ್ ಗಾದೆಪ್ಪ, ಉಪ ಮೇಯರ್ ಮುಬೀನಾ, ಕಾರ್ಪೊರೇಟರ್‌ಗಳು, ಅಧಿಕಾರಿಗಳು ಇದ್ದರು.
ಕೂಡಲೇ ಸೈಟು ಹಂಚಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ನಗರದ ಅಲ್ಲಂ ಭವನದ ಬಳಿ ಅಭಿವೃದ್ಧಿಪಡಿಸಿರುವ 100 ಎಕರೆಗೂ ಅಧಿಕ ವಿಸ್ತೀರ್ಣದ ಬಡಾವಣೆಯಲ್ಲಿ ಕೂಡಲೇ ನಿವೇಶನಗಳನ್ನು ವಿತರಣೆ ಮಾಡುವಂತೆ ಸಚಿವರು ಆಯುಕ್ತ ಖಲೀಲ್ ಸಾಬ್ ಮತ್ತು ಅಧ್ಯಕ್ಷ ಜೆ.ಎಸ್ ಆಂಜನೇಯಲು ಅವರಿಗೆ ಸೂಚನೆ ನೀಡಿದರು. ಇದಕ್ಕೆ ಯಾವುದೇ ಸಬೂಬು ನೀಡಬಾರದು. ಅಗತ್ಯವಿದ್ದರೆ ಇನ್ನೂ 100 ಎಕರೆಯಲ್ಲಿ ಬಡಾವಣೆ ಅಭಿವೃದ್ಧಿ ಮಾಡುವಂತೆಯೂ ಅವರು ಸಲಹೆ ನೀಡಿದರು.
ಮಾಧ್ಯಮಗಳಿಗೆ ನಿರ್ಬಂಧ ಕಾರ್ಪೊರೇಟರ್ ಸಂಬಂಧಿಗಳಿಗೆ ಮಣೆ ಪತ್ರಕರ್ತರನ್ನು ಸಭೆಯಿಂದ ದೂರವಿಡುವ ಮಾತನಾಡಿದ ಜನಪ್ರತಿನಿಧಿಗಳು ಅಧಿಕಾರಿಗಳು ಕಾರ್ಪೊರೇಟರ್‌ಗಳ ಸಂಬಂಧಿಗಳಿಗೆ ಮಾತ್ರ ಮಣೆ ಹಾಕಿದರು. ಸಭೆಯಲ್ಲಿ ಮಹಿಳಾ ಕಾರ್ಪೊರೇಟರ್‌ಗಳಿಗೆ ಬದಲಾಗಿ ಅವರ ಪತಿಯರು ತಂದೆಯರು ಬಂದು ಕುಳಿತಿದ್ದರು. ಇದೆಲ್ಲ ಗೊತ್ತಿದ್ದರೂ ಸಚಿವರು ಶಾಸಕರು ಅಧಿಕಾರಿಗಳು ಸುಮ್ಮನ್ನೆ ಕುಳಿತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.