
ಬಳ್ಳಾರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅನ್ನಭಾಗ್ಯ ಅಕ್ಕಿಯ ಅಕ್ರಮ ಸಂಗ್ರಹ ಮತ್ತು ಮಾರಾಟದ ವಿರುದ್ಧದ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಕಳೆದ ಕೆಲವು ದಿನಗಳಿಂದ ತೀವ್ರಗೊಳಿಸಿದೆ.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಸೂಚನೆ ಮೇರೆಗೆ ಡಿ. 15ರಂದು ಬಳ್ಳಾರಿಯ 2ನೇ ಹಂತದ ಕೈಗಾರಿಕಾ ಪ್ರದೇಶದ ಗೋದಾಮುವೊಂದರ ಮೇಲೆ ದಾಳಿ ನಡೆಸಿದ್ದ ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ್ ಎಚ್.ಡಿ ತಲಾ 50 ಕೆ.ಜಿಯ 284 ಚೀಲ ಅಕ್ಕಿ ವಶಪಡಿಸಿಕೊಂಡಿದ್ದರು.
ಹೀಗಿರುವಾಗಲೇ, ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ 159ರಲ್ಲಿ ಸಾರ್ವಜನಿಕರಿಗೆ ವಿತರಣೆಯಾಗಬೇಕಾಗಿದ್ದ ಅಕ್ಕಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ಯಾಕ್ ಮಾಡಿ ಸಾಗಣೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿಗೆ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಲಭ್ಯವಾಗುತ್ತಲೇ ಜಿಲ್ಲಾಧಿಕಾರಿಯು ನಿರ್ದಿಷ್ಟ ಅಂಗಡಿ ಮೇಲೆ ದಾಳಿ ನಡೆಸುವಂತೆ ಉಪ ವಿಭಾಗಾಧಿಕಾರಿ ರಾಜೇಶ್‌ಗೆ ಜವಾಬ್ದಾರಿ ವಹಿಸಿದ್ದರು.
ದಾಳಿ ನಡೆಸಿದಾಗ ಒಟ್ಟು 10 ಮಂದಿ ಕೆಲಸದವರು ಅಕ್ಕಿಯನ್ನು ಪ್ಯಾಕ್ ಮಾಡುತ್ತಿರುವುದು ಕಂಡು ಬಂದಿದೆ. ಇಲ್ಲಿಯೂ ತಲಾ 50 ಕೆ.ಜಿಯ 100 ಚೀಲ ಅಕ್ಕಿ ವಶಕ್ಕೆ ಪಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಎರಡೂ ಘಟನೆ ಸಂಬಂಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಹಲವು ಮಂದಿ ಅಕ್ಕಿ ದಂಧೆಯಲ್ಲಿ ತೊಡಗಿದ್ದಾರೆ, ಸದ್ಯ ಜಿಲ್ಲಾಡಳಿತ ನಡೆಸುತ್ತಿರುವ ಚುರುಕಿನ ದಾಳಿಯಿಂದಾಗಿ ಅವರಿಗೆ ನಡುಕ ಶುರುವಾಗಿದೆ. ಯಾವಾಗ ನಮ್ಮ ಮೇಲೆ ದಾಳಿ ನಡೆಯುವುದೋ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಅಕ್ಕಿ ದಂಧೆಯ ವೇಗ ಕೊಂಚ ತಗ್ಗಿದೆ ಎಂದು ಹೇಳಲಾಗುತ್ತಿದೆ.
ಅಕ್ಕಿದಂಧೆಯಲ್ಲಿ ಹಿತಾಸಕ್ತಿ ಹೊಂದಿರುವವರೇ ತಮ್ಮ ವಿರೋಧಿ ಗುಂಪಿನ ವ್ಯಾಪಾರ ಹತ್ತಿಕ್ಕಲು ಜಿಲ್ಲಾಡಳಿತಕ್ಕೆ ದೂರು ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ಯಾವುದೇ ಮಾಹಿತಿ ನಿರ್ಲಕ್ಷಿಸದಿರುವ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಿದೆ.
ಬಳ್ಳಾರಿಯು ತುಂಗಭದ್ರಾ ಅಚ್ಚುಕಟ್ಟು ಪ್ರದೇಶ. ಇಲ್ಲಿ ಉತ್ಕೃಷ್ಟ ಗುಣಮಟ್ಟದ ಭತ್ತ ಬೆಳೆಯಲಾಗುತ್ತದೆ. ಇದರ ಜತೆಗೆ ಇಲ್ಲಿನ ಜನರ ಆಹಾರ ಪದ್ಧತಿಯಲ್ಲಿ ಜೋಳ ಪ್ರಧಾನ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುವ ಅಕ್ಕಿಗೆ ಇಲ್ಲಿ ಬೇಡಿಕೆ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಜನರಿಂದ ಕೆ.ಜಿಗೆ ₹10ರಂತೆ ಅಕ್ಕಿ ಖರೀದಿ ಮಾಡಿ, ಏಜೆಂಟರಿಗೆ ₹12–₹15 ರಂತೆ ಮಾರಾಟ ಮಾಡುತ್ತಿದ್ದಾರೆ. ಏಜೆಂಟರು, ದಂಧೆಕೋರರಿಗೆ ಅಕ್ಕಿಯನ್ನು ಮಾರಾಟ ಮಾಡುತ್ತಾರೆ. ಅವರು ಬೇರೆ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ.
ಅಕ್ರಮ ಅಕ್ಕಿ ದಂಧೆಗೆ ಜಿಲ್ಲೆಯಲ್ಲಿ ಅವಕಾಶ ನೀಡುವುದಿಲ್ಲ. ಇತ್ತೀಚೆಗೆ ಜಿಲ್ಲಾಡಳಿತದಿಂದ ನಡೆಸಲಾಗಿರುವ ದಾಳಿಗಳ ಮೂಲಕ ದಂಧೆಕೋರರಿಗೆ ಜಿಲ್ಲಾಡಳಿತವು ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ.ನಾಗೇಂದ್ರ ಪ್ರಸಾದ್ ಕೆ. ಬಳ್ಳಾರಿ ಜಿಲ್ಲಾಧಿಕಾರಿ
ಈ ವರ್ಷ 33 ದಾಳಿ
ಬಳ್ಳಾರಿಯಲ್ಲಿ ವ್ಯಾಪಕವಾಗಿ ಅಕ್ಕಿ ದಂಧೆ ನಡೆಯುತ್ತಿದ್ದರು ಈ ವರ್ಷ ಇಲ್ಲಿಯ ವರೆಗೆ ನಡೆದಿರುವ ದಾಳಿಗಳ ಸಂಖ್ಯೆ 33 ಮಾತ್ರ. ಇದರಲ್ಲಿ ಕೇವಲ 2033 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. 28 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನುತ್ತವೆ ದಾಖಲೆಗಳು. ಇವೆಲ್ಲವೂ ಸರ್ಕಾರಕ್ಕೆ ಲೆಕ್ಕ ಕೊಡಲಷ್ಟೇ ಮಾಡಿದ ದಾಳಿಗಳು ಎಂದು ಬಲ್ಲಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.