ADVERTISEMENT

ಬಳ್ಳಾರಿ | ದೀಪಾವಳಿ: ಪಟಾಕಿ ಖರೀದಿ ಜೋರು

ಬಳ್ಳಾರಿ ನಗರದ ಐಟಿಐ ಕಾಲೇಜು ಮೈದಾನದಲ್ಲಿ ಜನವೋ ಜನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 3:03 IST
Last Updated 21 ಅಕ್ಟೋಬರ್ 2025, 3:03 IST
ಬಳ್ಳಾರಿಯ ಐಟಿಐ ಕಾಲೇಜು ಮೈದಾನದಲ್ಲಿ ಅಂಗಡಿಯೊಂದರಲ್ಲಿ ಪಟಾಕಿ ಖರೀದಿ ಮಾಡುತ್ತಿರುವ ಗ್ರಾಹಕರು
ಬಳ್ಳಾರಿಯ ಐಟಿಐ ಕಾಲೇಜು ಮೈದಾನದಲ್ಲಿ ಅಂಗಡಿಯೊಂದರಲ್ಲಿ ಪಟಾಕಿ ಖರೀದಿ ಮಾಡುತ್ತಿರುವ ಗ್ರಾಹಕರು   

ಬಳ್ಳಾರಿ: ದೀಪಾವಳಿಯ ಸಂಭ್ರಮಕ್ಕೆ ಕಳೆಗಟ್ಟುವ ಪಟಾಕಿಗಳು ಮಾರುಕಟ್ಟೆಗೆ ಬಂದಿವೆ. ಮಕ್ಕಳನ್ನು ಸೆಳೆಯಲು ಫ್ಯಾನ್ಸಿ ಪಟಾಕಿಗಳೇ ಈ ಬಾರಿ ಹೆಚ್ಚಿವೆ. ಗಿಟಾರ್‌, ಡಕ್‌, ಫ್ಯಾಂಟಸಿ ಪಟಾಕಿಗಳು ಮಕ್ಕಳನ್ನು ಆಕರ್ಷಿಸುತ್ತಿವೆ. 

ಪ್ರತಿವರ್ಷದಂತೆ ಈ ವರ್ಷವೂ ಬಳ್ಳಾರಿ ನಗರದ ಐಟಿಐ ಕಾಲೇಜು ಮೈದಾನ ಮತ್ತು ಇನ್ನು ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ನೂರಾರು ಪಟಾಕಿ ಮಳಿಗೆಗಳು ತಲೆ ಎತ್ತಿವೆ.

ಆಗಸದಲ್ಲಿ ಚಿತ್ತಾರ ಮೂಡಿಸುವ, ಹೂಮಳೆಗರೆವಂಥ ದೃಶ್ಯ ಸೃಷ್ಟಿಸುವ ನೈಫ್ ಪಟಾಕಿಗಳಿಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದರೆ, ರಾಕೆಟ್‌, ಫ್ಲವರ್‌ಪಾಟ್‌ಗಳಿಗೆ ಮಕ್ಕಳು ಪ್ರಭಾವಿತರಾಗುತ್ತಿದ್ದಾರೆ. ರಾಜ ಮಹಾರಾಜರ ಖಡ್ಗದಂತಿರುವ ನೈಫ್ ಪಟಾಕಿಯ ಗೈರತ್ತೇ ಬೇರೆಯಾಗಿದ್ದರೂ ಯಾವುದೇ ಅಪಾಯವಿಲ್ಲದೇ ಪುಟ್ಟ ಮಕ್ಕಳೂ ಇದನ್ನು ಹೊತ್ತಿಸಬಹುದು. ಬಣ್ಣ ಬಣ್ಣದ ಬೆಳಕನ್ನು ಇದು ಚಿಮ್ಮಿಸುತ್ತದೆ. ಪಿಜ್ಜಾ ಪಟಾಕಿಗಳೂ ಮಾರುಕಟ್ಟೆ ಪ್ರವೇಶಿಸಿದ್ದು, ಮಕ್ಕಳು ಮುಗಿಬಿದ್ದು ಖರೀದಿಸುತ್ತಿದ್ದಾರೆ ಎಂದು ಪಟಾಕಿ ಮಳಿಗೆಯ ಮಾಲೀಕರು ಹೇಳುತ್ತಿದ್ದಾರೆ. 

ADVERTISEMENT

ಇದೆಂದು ಕೇಳರಿಯದ, ಪ್ರಾಣಿಗಳನ್ನು ಹೋಲುವ ಜಂಗಲ್‌ ಫ್ಯಾಂಟಸಿ ಪಟಾಕಿಗಳೂ ಅಂಗಡಿಗಳಲ್ಲಿ ಕಾಣಿಸುತ್ತಿವೆ. ಇವುಗಳ ಮೇಲೆ ಮಕ್ಕಳಿಗೆ ಎಲ್ಲಿಲ್ಲದ ಆಕರ್ಷಣೆ ಎನ್ನುತ್ತಾರೆ ಐಟಿಐ ಕಾಲೇಜು ಮೈದಾನದಲ್ಲಿ ಅಂಗಡಿ ಹಾಕಿರುವ ಅನಂದ. 

ಇನ್ನುಳಿದಂತೆ ಆಟಂ ಬಾಂಬ್‌, ಲಕ್ಷ್ಮೀ ಪಟಾಕಿ ಸೇರಿದಂತೆ ಭಾರಿ ಸದ್ದು ಮಾಡುವ ಪಟಾಕಿಗಳು ಎಂದಿನಂತೆ ಯುವ ಜನರ ಆಲ್‌ಟೈಂ ಫೇವರಿಟ್‌ ಆಗಿಯೇ ಉಳಿದಿದ್ದು, ಅವುಗಳ ಖರೀದಿಯೂ ಜೋರಾಗಿದೆ. 

ಪಿಸ್ತೂಲ್‌: ವಿಶಿಷ್ಟ, ವಿಭಿನ್ನ ಪಿಸ್ತೂಲ್‌, ಗನ್‌ಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ. ಕಡಿಮೆ ಬೆಲೆಯ ಪ್ಲಾಸ್ಟಿಕ್‌ ಪಿಸ್ತೂಲ್‌ಗಳಿಂದ ಹಿಡಿದು ಅಧಿಕ ಬೆಲೆಯ ಕಬ್ಬಿಣದ ಪಿಸ್ತೂಲ್‌ಗಳವರೆಗೆ ತರಹೇವಾರಿ ಇವೆ.

ಈ ಬಾರಿ ಪಟಾಕಿ ಮಾರಾಟ ಉತ್ತಮವಾಗಿದೆ. ಗ್ರಾಹಕರೂ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ. ಆಗಾಗ ಬರುವ ಮಳೆಯು ಸ್ವಲ್ಪ ಸಮಸ್ಯೆ ಸೃಷ್ಟಿಸುತ್ತಿದೆ. ಅದು ಹೊರತುಪಡಿಸಿದರೆ ಸಮಸ್ಯೆ ಏನಿಲ್ಲ.
  ಶಿವಾ ರೆಡ್ಡಿ ಪಟಾಕಿ ಮಳಿಗೆಯೊಂದರ ಮಾಲೀಕರು

ಶೇ 50ರಷ್ಟು ರಿಯಾಯಿತಿ  

ಗ್ರಾಹಕರನ್ನು ಆಕರ್ಷಿಸಲು ಅಂಗಡಿ ಮಾಲೀಕರು ಶೇ. 50ರಿಂದ 60ರಷ್ಟು ರಿಯಾಯಿತಿಯನ್ನೂ ನೀಡುತ್ತಿದ್ದಾರೆ. ಇನ್ನೂ ಕೆಲವು ಅಂಗಡಿ ಮಾಲೀಕರು ರಿಯಾಯಿತಿ ಜೊತೆಗೆ ಕಾಂಪ್ಲಿಮೆಂಟರಿ ಎಂದು ಎಂದೆರಡು ವಿಧದ ಪಟಾಕಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಕೆಲವು ಪಟಾಕಿಗಳನ್ನು ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಬಾಕ್ಸ್‌ ಲೆಕ್ಕದಲ್ಲಿ ತೆಗೆದುಕೊಳ್ಳುವುದಾದರೆ ₹550ರಿಂದ ಆರಂಭವಾಗುತ್ತಿದೆ.  ಪಟಾಕಿ ಅಂಗಡಿಗೆ ಮಳೆ ಕಾಟ ನಗರದ ಐಟಿಐ ಕಾಲೇಜು ಮೈದಾನವೇ ಮೊದಲಿನಿಂದಲೂ ಬಳ್ಳಾರಿ ಜನರಿಗೆ ಪಟಾಕಿ ಅಡ್ಡ. ಇಲ್ಲಿ ಪ್ರತಿ ವರ್ಷವೂ ಹತ್ತಾರು ಅಂಗಡಿಗಳು ತಲೆ ಎತ್ತುತ್ತವೆ. ಈ ವರ್ಷ ಅಂಗಡಿಗಳೇನೋ ಎರಡು ದಿನಗಳಿಗೆ ಮೊದಲು ಆರಂಭವಾಗಿವೆ. ಆದರೆ ಅಂಗಡಿಗಳು ಆರಂಭವಾದಾಗಿನಿಂದಲೂ ಮಳೆ ಕಾಟ ಆರಂಭವಾಗಿದೆ. ಸಂಜೆ ರಾತ್ರಿ ಹೊತ್ತಲ್ಲೇ ಸುರಿಯುತ್ತಿರುವ ಮಳೆಯು ವ್ಯಾಪಾರವನ್ನು ಕಸಿಯುತ್ತಿದೆ ಎಂದು ವ್ಯಾಪಾರಸ್ತರು ದೂರುತ್ತಿದ್ದಾರೆ.  

ಗಮನ ಸೆಳೆದ ಸಿಂಗಮ್‌ ಪಟಾಕಿ  ಸಿಂಗಮ್‌ ಪಟಾಕಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.  ಈ ಪಟಾಕಿಯನ್ನು ಹೊತ್ತಿಸಿದರೆ 120 ಬಾರಿ ಬಾನಿಗೆ ಸಿಡಿತಲೆಗಳನ್ನು ಸಿಡಿಸುತ್ತದೆ. ಆಗಸದಲ್ಲಿ ಚಿತ್ತಾರವನ್ನು ಸೃಷ್ಟಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.